ಎಂ.ಬಿ. ಪಾಟೀಲ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಕೈಗಾರಿಕೆಗಳ ಸ್ಥಾಪನೆಗೆ ವಿವಿಧ ಇಲಾಖೆಗಳಿಂದ ಅಗತ್ಯವಾಗಿ ಪಡೆದುಕೊಳ್ಳಬೇಕಾದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಹಾಗೂ ಅನುಮತಿ ನೀಡಲು ಇರುವ ಅವಧಿಯನ್ನು ಇಳಿಕೆ ಮಾಡಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಗುರುವಾರ ವಿಧಾನಸೌಧದಲ್ಲಿ ‘ಸುಲಲಿತ ವಾಣಿಜ್ಯ ಸಂಸ್ಕೃತಿ ಮತ್ತು ಏಕಗವಾಕ್ಷಿ ಸಮಿತಿ’ಗಳ ಸಭೆ ನಡೆಸಿದ ಅವರು ಈ ಕುರಿತು ವಿವರ ನೀಡಿದರು.
‘ಅಗ್ನಿಶಾಮಕ ದಳದ ಎನ್ಒಸಿಗೆ 60 ದಿನ ಕಾಲಾವಕಾಶ ಇದ್ದು, ಅದನ್ನು 21 ದಿನಕ್ಕೆ ಇಳಿಸಲಾಗಿದೆ. ವಿದ್ಯುತ್ ಸೌಲಭ್ಯಕ್ಕೆ ಬೇಕಾದ ಅನುಮತಿಯ ಕಾಲಾವಕಾಶವನ್ನು 25 ದಿನಗಳಿಂದ 10 ದಿನಕ್ಕೆ, ಲಿಫ್ಟ್/ಎಸ್ಕಲೇಟರ್ ಬಳಕೆಗೆ ಬೇಕಾದ ಅನುಮತಿಗೆ 40 ದಿನಗಳಿಂದ 20 ದಿನಕ್ಕೆ, ಹೊಸ ನಲ್ಲಿ ಸಂಪರ್ಕ ಬೇಕಿದ್ದ ಎನ್‌ಒಸಿಗೆ 42 ದಿನಗಳಿಂದ 30 ದಿನಕ್ಕೆ ಇಳಿಸಲು ತೀರ್ಮಾನಿಸಲಾಗಿದೆ’ ಎಂದರು.
ಕಾರ್ಮಿಕ ಇಲಾಖೆಯು ಕೈಗಾರಿಕಾ ಯೋಜನೆ ಮತ್ತು ಲೈಸೆನ್ಸ್, ಬಾಯ್ಲರ್ ನೋಂದಣಿಗಳನ್ನು ಇನ್ನು ಮುಂದೆ 30 ದಿನಗಳ ಬದಲು 14 ದಿನಗಳಲ್ಲಿ ನೀಡಲಿದೆ. ಈ ಎಲ್ಲ ನಿಯಮಗಳಿಗೆ ತರಬೇಕಾದ ತಿದ್ದುಪಡಿಗಳಿಗೆ ಸಂಬಂಧಿಸಿ, ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಸದ್ಯದಲ್ಲೇ ಕಾನೂನಿನ ರೂಪ ನೀಡಲಾಗುವುದು ಎಂದು ಹೇಳಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯಲ್ಲಿ ಕೂಡ ವಿವಿಧ ರೀತಿಯ ಅನುಮತಿಗಳಿಗೆ ಇದುವರೆಗೆ ಇದ್ದ ಕಾಲಾವಧಿಯನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ. ಭೂ ಬಳಕೆ ಉದ್ದೇಶ ಪರಿವರ್ತನೆಗೆ ಅನುಮತಿ ನೀಡಲು ಬೆಂಗಳೂರಿನ ಪರಿಮಿತಿಯಲ್ಲಿ ಈವರೆಗೆ 120 ದಿನಗಳ ಕಾಲಾವಕಾಶವಿತ್ತು. ಇನ್ನು ಮುಂದೆ ಇದು 45 ದಿನಗಳಲ್ಲಿ ಇಳಿಕೆಯಾಗಲಿದೆ ಎಂದು ಅವರು ವಿವರಿಸಿದರು.
‘ನೆರೆ ರಾಜ್ಯಗಳಿಗಿಂತ ಕೈಗಾರಿಕಾ ಸ್ನೇಹಿಯಾದ ವ್ಯವಸ್ಥೆಯನ್ನು ತರಲು ಪಣ ತೊಟ್ಟಿದ್ದೇವೆ. ಏಕಗವಾಕ್ಷಿ ಯೋಜನೆಯಡಿ ಇದುವರೆಗೆ 20 ಇಲಾಖೆಗಳ 115 ಸೇವೆಗಳನ್ನು ಜೋಡಣೆ ಮಾಡಿದ್ದು, ಬಾಕಿ ಇರುವ 28 ಸೇವೆಗಳನ್ನು ಆದ್ಯತಾ ಕ್ಷೇತ್ರಗಳೆಂದು ಪರಿಗಣಿಸಿ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.