ADVERTISEMENT

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ ಭಾಷಣದ ಮುಖ್ಯ ಅಂಶಗಳು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 7:36 IST
Last Updated 17 ಏಪ್ರಿಲ್ 2020, 7:36 IST
ಶಕ್ತಿಕಾಂತ ದಾಸ್
ಶಕ್ತಿಕಾಂತ ದಾಸ್   

ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕೊರೊನಾ ವೈರಸ್ ಸೋಂಕು ಹೆಚ್ಚಳ, ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಮತ್ತು ಷೇರುಪೇಟೆಯಲ್ಲಿ ಏರಿಳಿಕೆಯ ಹೋಯ್ದಾಟದ ಹಿನ್ನೆಲೆಯಲ್ಲಿ ಗವರ್ನರ್ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿತ್ತು. ಮಾತುಕತೆಯ ವೇಳೆ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಕೆಲ ಮುಖ್ಯ ಸಂಗತಿಗಳನ್ನು ಪ್ರಕಟಿಸಿದರು.

ಗವರ್ನರ್ ಮಾಧ್ಯಮಗೋಷ್ಠಿಯ ಮುಖ್ಯಾಂಶಗಳು ಇವು...

1) ಮಾರ್ಚ್ 27ರ ನಂತರ ವಿಶ್ವ ಆರ್ಥಿಕತೆ ಹಾಳಾಗಿದೆ. ಈ ಸಂಕಷ್ಟ ಸಂದರ್ಭದಲ್ಲಿ ಕೆಲಸವೇ ದೇಶಗಳು ಸಕಾರಾತ್ಮಕ ಪ್ರಗತಿ ದರ ಕಾಯ್ದುಕೊಂಡಿವೆ. ಅದರದಲ್ಲಿ ಭಾರತವೂ ಒಂದು.

2) ಭಾರತದ ವಿದೇಶಿ ವಿನಿಮಯ ಮೀಸಲು 11.8 ತಿಂಗಳ ಆಮದು ನಿರ್ವಹಣೆಗೆ ಸಾಕಾಗುವಷ್ಟಿದೆ. 476.5 ಶತಕೋಟಿ ಡಾಲರ್‌ನಷ್ಟು ಮೀಸಲು ನಿಧಿಯ ಸಂಗ್ರಹ ನಮ್ಮಲ್ಲಿದೆ.

3) ವಿಶ್ವ ಹಣಕಾಸು ನಿಧಿ (ಐಎಂಎಫ್‌) ರೂಪಿಸಿರುವ ನಿಯಮಾವಳಿಗಳ ಅನ್ವಯ, ಭಾರತದ ಅಭಿವೃದ್ಧಿದರವು ಜಿ20 ದೇಶಗಳಲ್ಲಿಯೇ ಅತಿಹೆಚ್ಚು ಎಂದು ಅಂದಾಜಿಸಲಾಗಿದೆ.

4) ಭಾರತವು 2022ರ ಹಣಕಾಸು ವರ್ಷದಲ್ಲಿ ವೇಗದ ಪ್ರಗತಿ ದಾಖಲಿಸುವ ನಿರೀಕ್ಷೆಯಿದೆ.

5) ಏಪ್ರಿಲ್ 14ರಂದು ಐಎಂಎಫ್ ಜಾಗತಿಕ ಅಭಿವೃದ್ಧಿ ನಿರೀಕ್ಷೆಗಳನ್ನು ಪ್ರಕಟಿಸಿತು. 2020ರಲ್ಲಿ ಜಾಗತಿಕ ಆರ್ಥಿಕತೆಯು ಅತ್ಯಂತ ಕೆಟ್ಟ ರೀತಿಯಲ್ಲಿ ಹಿಂಜರಿತ ಅನುಭವಿಸುತ್ತದೆ ಎಂದು ಹೇಳಿದೆ. ಇದು ಗ್ರೇಟ್‌ ಡಿಪ್ರೆಷನ್‌ ನಂತರದ ಅತ್ಯಂತ ಕೆಟ್ಟ ಹಿಂಜರಿತವಾಗಲಿದೆ ಎಂದು ಹೇಳಿದೆ.

6) ಮಾರ್ಚ್ 27ರ ನಂತರ ಸ್ಥೂಲ ಆರ್ಥಿಕತೆ ಮತ್ತು ಹಣಕಾಸು ವಿದ್ಯಮಾನಗಳು ಹಾಳಾಗಿವೆ. ಕೆಲ ಸ್ಥಳಗಳಲ್ಲಿ ಇದರ ತೀವ್ರತೆ ಹೆಚ್ಚಾಗಿ ಕಾಣಿಸಿದೆ, ಕೆಲವೆಡೆ ಪ್ರಭಾವ ಕಡಿಮೆಯಿದೆ.

7) ಮಾರ್ಚ್‌ ತಿಂಗಳಲ್ಲಿ ಗ್ರಾಹಕ ಉತ್ಪನ್ನಗಳ ದರ ಆಧರಿಸಿದ ಹಣದುಬ್ಬರವು (ಸಿಪಿಐ) ಶೇ 5.9 ಇತ್ತು. ಆಹಾರದ ಹಣದುಬ್ಬರದ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ದತ್ತಾಂಶಗಳು ಹೇಳಿವೆ. ಆದರೆ ಇತರ ವಿಭಾಗಗಳಲ್ಲಿ ಬೆಲೆಗಳ ಒತ್ತಡ ಹಾಗೆಯೇ ಇದೆ. ಆಹಾರದ ಬೆಲೆಗಳು ಏಪ್ರಿಲ್‌ ತಿಂಗಳಲ್ಲಿ ಶೇ 2.3ರಷ್ಟು ಹೆಚ್ಚಾಗಿದೆ. ಈರುಳ್ಳಿ ಮತ್ತು ಎಲ್‌ಪಿಜಿ ಬೆಲೆ ಕಡಿಮೆಯಾಗಿದೆ. ಹಣದುಬ್ಬರ ನಿಯಂತ್ರಣದಲ್ಲಿಡಲು ಇದು ಸಹಕಾರಿ.

ಆರ್‌ಬಿಐ ಗವರ್ನರ್‌ರ ಮುಖ್ಯ ಘೋಷಣೆಗಳು

1) ಆರ್ಥಿಕ ವ್ಯವಸ್ಥೆಯಲ್ಲಿ ಸ್ಥಿರತೆ ಮತ್ತು ಅಗತ್ಯ ಪ್ರಮಾಣದ ದ್ರವ್ಯತೆ ಕಾಪಾಡಲು ಬ್ಯಾಂಕ್‌ಗಳು ಸಾಲ ನೀಡುವುದನ್ನು ಉತ್ತೇಜಿಸಲಾಗುತ್ತದೆ. ಇದಕ್ಕಾಗಿ ಆರ್‌ಬಿಐ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

2) ಸಣ್ಣ ಮತ್ತು ಮಧ್ಯಮ ಗಾತ್ರದ ಕಾರ್ಪೊರೇಟ್ ಕಂಪನಿಗಳ ವಹಿವಾಟಿಗೆ ಕೋವಿಡ್-19ರ ಕಾರಣ ಧಕ್ಕೆಯೊದಗಿದೆ. ಅವರಿಗೆ ದೀರ್ಘಾವಧಿ ಸಾಲ ಒದಗಿಸುವ ಬಗ್ಗೆ ಆರ್‌ಬಿಐ ಗಮನ ನೀಡಲಿದೆ.

3) ವಿಶೇಷ ಮರು ಅನುದಾನ ಯೋಜನೆಯಡಿ ರಾಷ್ಟ್ರೀಯ ಗೃಹ ನಿರ್ಮಾಣ ಮಂಡಳಿಗೆ (ಎನ್‌ಎಚ್‌ಬಿ) 10,000 ಕೋಟಿ ಒದಗಿಸಲಾಗುವುದು.

4) ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್‌), ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್‌ಐಡಿಬಿ), ರಾಷ್ಟ್ರೀಯ ಗೃಹ ನಿರ್ಮಾಣ ಬ್ಯಾಂಕ್‌ಗಳಿಗೆ (ಎನ್‌ಎಚ್‌ಬಿ) ವಿಶೇಷ ಮರು ಬಂಡವಾಳ ಪೂರೈಕೆಗಾಗಿ 50 ಸಾವಿರ ಕೋಟಿ ರೂಪಾಯಿ ಒದಗಿಸಲು ನಿರ್ಧರಿಸಲಾಗಿದೆ.

5) ಉತ್ಪಾದಕ ಕ್ಷೇತ್ರಗಳಿಗೆ ನಗದು ಪೂರೈಕೆ ಸುಗಮಗೊಳಿಸಲು ಆರ್‌ಬಿಐ ರಿವರ್ಸ್‌ ರೆಪೊ ಪ್ರಮಾಣವನ್ನು ಕಡಿಮೆ ಮಾಡಿದೆ.

6) ತಕ್ಷಣದಿಂದ ಜಾರಿಗೆ ಬರುವಂತೆ ಫಿಕ್ಸ್‌ಡ್ ರಿವರ್ಸ್‌ ರೆಪೊ ಅನುಪಾತವನ್ನು ದ್ರವ್ಯತೆ ಹೊಂದಾಣಿಕೆ ಸವಲತ್ತಿನಡಿ (ಲಿಕ್ವಿಡಿಟಿ ಅಡ್ಜಸ್ಟ್‌ಮೆಂಟ್ ಫೆಸಿಲಿಟಿ - ಎಸ್‌ಎಎಫ್) 25 ಮೂಲ ಅಂಶಗಳಷ್ಟು ಕಡಿತಗೊಳಿಸಲಾಗಿದೆ. ಪ್ರಸ್ತುತ ಶೇ 4ರಷ್ಟಿರುವ ಎಲ್‌ಎಎಫ್ ಶೇ 3.27ಕ್ಕೆ ಇಳಿಯಲಿದೆ.

7) 90 ದಿನಗಳಲ್ಲಿ ಸಾಲ ಮರುಪಾವತಿ ಮಾಡದವರಿಗೆ ಆರ್‌ಬಿಐ ವಿನಾಯ್ತಿಯಡಿ ರಿಯಾಯ್ತಿ ಸಿಗುತ್ತದೆ. ಅವರ ಸಾಲವನ್ನು ಎನ್‌ಪಿಎ ಎಂದು ಪರಿಗಣಿಸುವುದಿಲ್ಲ ಮತ್ತು ಅವರ ಕ್ರೆಡಿಟ್‌ ಸ್ಕೋರ್ ಕಡಿಮೆಯಾಗುವುದಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.