ADVERTISEMENT

ಕೋಟಕ್‌ ಮಹೀಂದ್ರ ಬ್ಯಾಂಕ್‌ ಲಾಭ ಶೇ 26ರಷ್ಟು ಹೆಚ್ಚಳ

ಪಿಟಿಐ
Published 23 ಜುಲೈ 2022, 10:44 IST
Last Updated 23 ಜುಲೈ 2022, 10:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಖಾಸಗಿ ವಲಯದ ಕೋಟಕ್‌ ಮಹೀಂದ್ರ ಬ್ಯಾಂಕ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹ 2,071 ಕೋಟಿ ಆಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 1,642 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿಯ ಲಾಭವು ಶೇಕಡ 26ರಷ್ಟು ಹೆಚ್ಚಾಗಿದೆ. ಸುಸ್ತಿ ಸಾಲಗಳ ಪ್ರಮಾಣದಲ್ಲಿ ಇಳಿಕೆ ಆಗಿರುವುದೇ ಇದಕ್ಕೆ ಕಾರಣ ಎಂದು ಬ್ಯಾಂಕ್‌ ತಿಳಿಸಿದೆ.

ಏಪ್ರಿಲ್‌–ಜೂನ್‌ ಅವಧಿಯಲ್ಲಿ ಬ್ಯಾಂಕ್‌ನ ಒಟ್ಟು ವರಮಾನ ₹ 8,063 ಕೋಟಿಯಿಂದ ₹ 8,582 ಕೋಟಿಗೆ ಏರಿಕೆ ಆಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಈ ಅವಧಿಯಲ್ಲಿ ಬಡ್ಡಿ ವರಮಾನ ₹ 6,480 ಕೋಟಿಯಿಂದ ₹ 7,338 ಕೋಟಿಗೆ ಏರಿಕೆ ಆಗಿದೆ. ವಸೂಲಾಗದ ಸಾಲದ ಸರಾಸರಿ (ಎನ್‌ಪಿಎ) ಪ್ರಮಾಣವು 2021ರ ಜೂನ್‌ ತ್ರೈಮಾಸಿಕದಲ್ಲಿ ಶೇ 3.56 ರಷ್ಟು ಇತ್ತು. ಇದು 2022ರ ಜೂನ್‌ ತ್ರೈಮಾಸಿಕದಲ್ಲಿ ಶೇ 2.24ಕ್ಕೆ ಇಳಿಕೆ ಆಗಿದೆ. ನಿವ್ವಳ ಎನ್‌ಪಿಎ ಶೇ 1.28 ರಿಂದ ಶೇ 0.62ಕ್ಕೆ ಇಳಿಕೆ ಕಂಡಿದೆ.

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ಎರಡು ಪಟ್ಟು ಇಳಿಕೆ ಕಂಡಿದೆ. ಹಿಂದಿನ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹ 935 ಕೋಟಿ ತೆಗೆದಿಡಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ₹ 24 ಕೋಟಿಗೆ ಇಳಿಕೆ ಆಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.