ADVERTISEMENT

ಹೆಸರು ಕಾಳು: ಖರೀದಿ ಪ್ರಮಾಣ ಹೆಚ್ಚಳಕ್ಕೆ ಕೋರಿಕೆ

ಅನುಮತಿ ನೀಡುವುದಾಗಿ ಕೇಂದ್ರದ ಭರವಸೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2018, 19:42 IST
Last Updated 26 ಸೆಪ್ಟೆಂಬರ್ 2018, 19:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕನಿಷ್ಠ ಬೆಂಬಲಬೆಲೆ ಯೋಜನೆ ಅಡಿ ಹೆಸರು ಕಾಳು ಖರೀದಿಗೆ ನಿಗದಿಪಡಿಸಿರುವ ಗರಿಷ್ಠ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಬುಧವಾರ ಮನವಿ ಸಲ್ಲಿಸಿದೆ.

ಕೇಂದ್ರ ಕೃಷಿ ಸಚಿವ ರಾಧಾ ಮೋಹನ ಸಿಂಗ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಕೃಷಿ ಮಾರುಕಟ್ಟೆ ಸಚಿವ ಬಂಡೆಪ್ಪ ಕಾಶೆಂಪುರ ನೇತೃತ್ವದ ನಿಯೋಗ, ಕಳೆದ ಆಗಸ್ಟ್‌ 29ರಂದು ಕೇಂದ್ರವು ಹೊರಡಿಸಿರುವ ಆದೇಶದ ಪ್ರಕಾರ ಉತ್ಪಾದನೆಯ ಕೇವಲ ಶೇ 23ರಷ್ಟು ಹೆಸರು ಕಾಳು ಖರೀದಿಸಲು ಅನುಮತಿ ನೀಡಲಾಗಿದ್ದು, ಅದನ್ನು ಶೇ 40ಕ್ಕೆ ಹೆಚ್ಚಿಸಬೇಕು ಎಂದು ಕೋರಿತು.

ಪ್ರಸಕ್ತ ವರ್ಷ ಉತ್ತರ ಕರ್ನಾಟಕ ಭಾಗದ ಗದಗ, ಧಾರವಾಡ, ಬಾಗಲಕೋಟೆ, ಕಲಬುರ್ಗಿ, ವಿಜಯಪುರ, ಬೀದರ್‌, ಯಾದಗಿರಿ ಜಿಲ್ಲೆಗಳಲ್ಲಿ 1.38 ಲಕ್ಷ ಟನ್‌ ಹೆಸರು ಕಾಳು ಬೆಳೆಯಲಾಗಿದ್ದು, ಒಟ್ಟು 1.14 ಲಕ್ಷ ರೈತರು ಮಾರಾಟಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ.

ADVERTISEMENT

ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಖರೀದಿ ಪ್ರಕ್ರಿಯೆ ಆರಂಭಿಸಿ ಇದುವರೆಗೆ 318 ಟನ್‌ ಹೆಸರು ಖರೀದಿಸಲಾಗಿದೆ. ಪ್ರತಿ ರೈತರಿಂದ ಕನಿಷ್ಠ 10 ಕ್ವಿಂಟಲ್‌ ಖರೀದಿಯ ಬೇಡಿಕೆ ಇದೆ ಎಂದು ಸಚಿವ ಕಾಶೆಂಪುರ ಸುದ್ದಿಗಾರರಿಗೆ ತಿಳಿಸಿದರು.

ಪ್ರಮಾಣ ಹೆಚ್ಚಿಸುವ ಕುರಿತು ಶೀಘ್ರವೇ ಆದೇಶ ಹೊರಡಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದು, ರೈತರು ಆತಂಕಪಡುವ ಅಗತ್ಯವಿಲ್ಲ. ಆರಂಭದಲ್ಲಿ ರೈತರಿಂದ 4 ಕ್ವಿಂಟಲ್‌ ಹೆಸರು ಕಾಳನ್ನು ಖರೀದಿಸಲಾಗುತ್ತದೆ. ಕೇಂದ್ರದ ಆದೇಶ ಬಂದ ನಂತರ ಮತ್ತೆ 6 ಕ್ವಿಂಟಲ್‌ ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಉದ್ದು ಮತ್ತು ಸೋಯಾ ಖರೀದಿಗೂ ಅನುಮತಿ ನೀಡುವಂತೆ ಮನವಿ ಸಲ್ಲಿಸಲಾಗಿದ್ದು, ಶೇ 25ರಷ್ಟು ಖರೀದಿಗೆ ಅನುಮತಿ ದೊರೆಯಲಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.