ನವದೆಹಲಿ: ಹೊಸ ನೇಮಕಾತಿಗಳಿಗೆ ಉತ್ತೇಜನ ನೀಡಲು ಆರಂಭಿಸಿದ ಆತ್ಮನಿರ್ಭರ ಭಾರತ ರೋಜ್‌ಗಾರ್ ಯೋಜನೆಯನ್ನು (ಎಬಿಆರ್‌ವೈ),ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಮುಂದಿನ ವರ್ಷದ ಮಾರ್ಚ್‌ವರೆಗೂ ವಿಸ್ತರಿಸುವ ಕುರಿತು ಕಾರ್ಮಿಕ ಮತ್ತು ಉದ್ಯೊಗ ಸಚಿವಾಲಯ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಯು ಜೂನ್ 30ಕ್ಕೆ ಅಂತ್ಯವಾಗಬೇಕಿದೆ. ಈ ಯೋಜನೆಯ ಅಡಿ, ₹ 15 ಸಾವಿರಕ್ಕಿಂತ ಕಡಿಮೆ ವೇತನ ಪಡೆಯುವ, ಹೊಸದಾಗಿ ನೇಮಕಗೊಂಡ ಕಾರ್ಮಿಕರ ಪಿ.ಎಫ್. ಖಾತೆಗಳಿಗೆ ಎರಡು ವರ್ಷಗಳ ಅವಧಿಗೆ ಕಾರ್ಮಿಕರ ಪಾಲಿನ ಶೇಕಡ 12ರಷ್ಟು ಮತ್ತು ಉದ್ಯೋಗದಾತರ ಪಾಲಿನ ಶೇ 12ರಷ್ಟನ್ನು (ಒಟ್ಟು ಶೇ 24ರಷ್ಟು) ಕೇಂದ್ರ ಸರ್ಕಾರವೇ ಪಾವತಿಸುತ್ತದೆ.
ಯೋಜನೆಯ ಅವಧಿಯನ್ನು ಮಾರ್ಚ್ 2022ರವರೆಗೆ ವಿಸ್ತರಿಸುವುದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟದ ಟಿಪ್ಪಣಿಯೊಂದನ್ನು ಸಿದ್ಧಪಡಿಸುವ ಪ್ರಕ್ರಿಯೆಯನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.
ಇದುವರೆಗೆ ಹೊಸದಾಗಿ ನೇಮಕ ಆಗಿರುವ 21 ಲಕ್ಷ ಕಾರ್ಮಿಕರಿಗೆ ಈ ಯೋಜನೆಯ ಅಡಿ ಪ್ರಯೋಜನ ಲಭಿಸಿದೆ. ಇದು ಸರ್ಕಾರದ, 58.5 ಲಕ್ಷ ಕಾರ್ಮಿಕರಿಗೆ ಪ್ರಯೋಜನ ಒದಗಿಸುವ ಗುರಿಗಿಂತಲೂ ಕಡಿಮೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಮುಂದಿನ ವರ್ಷದ ಮಾರ್ಚ್‌ವರೆಗೂ ಯೋಜನೆಯನ್ನು ವಿಸ್ತರಿಸಲು ಸಚಿವಾಲಯ ಒತ್ತು ನೀಡಲಿದೆ ಎಂದು ಮೂಲಗಳು ಹೇಳಿವೆ.
2020ರಿಂದ 2023ರ ಅವಧಿಗೆ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ₹ 22,810 ಕೋಟಿ ಮೀಸಲಿಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.