ನವದೆಹಲಿ: ಜಾಗತಿಕ ಅನಿಶ್ಚಿತ ಸ್ಥಿತಿಯ ನಡುವೆಯೂ 2024–25ರ ಆರ್ಥಿಕ ವರ್ಷದಲ್ಲಿ ಚರ್ಮದಿಂದ ತಯಾರಿಸಿದ ಪಾದರಕ್ಷೆಗಳು ಮತ್ತು ಉತ್ಪನ್ನಗಳ ರಫ್ತು ಶೇ 25ರಷ್ಟು ಏರಿಕೆಯಾಗಿದೆ ಎಂದು ಚರ್ಮದ ಉತ್ಪನ್ನಗಳ ರಫ್ತು ಮಂಡಳಿ (ಸಿಎಲ್‌ಇ) ಸೋಮವಾರ ತಿಳಿಸಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಈ ಉತ್ಪನ್ನಗಳ ರಫ್ತಿನ ಮೌಲ್ಯ ₹48,665 ಕೋಟಿಯಷ್ಟಾಗಿದೆ. 2025–26ರ ಆರ್ಥಿಕ ವರ್ಷದಲ್ಲಿ ಇದು ₹55,495 ಕೋಟಿಯಾಗಬಹುದು ಎಂದು ಹೇಳಿದೆ.
‘ಅಮೆರಿಕ ಮತ್ತು ಬ್ರಿಟನ್ ಮಾರುಕಟ್ಟೆಯಲ್ಲಿ ದೇಶದ ಉತ್ಪನ್ನಗಳಿಗೆ ಉತ್ತಮ ಬೇಡಿಕೆಯಿದೆ. ಶೇ 10ರಷ್ಟು ಸುಂಕ ಹೆಚ್ಚಳದಿಂದ, ಎಲ್ಲ ರಫ್ತುದಾರರು ಖರೀದಿದಾರರಿಗೆ ರಿಯಾಯಿತಿ ನೀಡುತ್ತಿದ್ದಾರೆ’ ಎಂದು ಸಿಎಲ್‌ಇ ಅಧ್ಯಕ್ಷ ರಾಜೇಂದ್ರ ಕುಮಾರ್ ಜಲನ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲೂ ಈ ರಾಷ್ಟ್ರಗಳಿಂದ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆ ಇದೆ. ಪ್ರಸ್ತುತ ಉದ್ಯಮದ ಒಟ್ಟು ವಹಿವಾಟಿನ ಮೌಲ್ಯ ₹1.62 ಲಕ್ಷ ಕೋಟಿಯಷ್ಟಾಗಿದ್ದು, ಇದರಲ್ಲಿ ರಫ್ತು ₹42,688 ಕೋಟಿಯಾಗಿದೆ. ವಲಯವು 42 ಲಕ್ಷ ಜನರಿಗೆ ಉದ್ಯೋಗ ನೀಡಿದೆ. 2030ರ ವೇಳೆಗೆ ಒಟ್ಟು ವಹಿವಾಟು ₹3.32 ಲಕ್ಷ ಕೋಟಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.