ADVERTISEMENT

ಎಲ್‌ಐಸಿ ಐಪಿಒ: ಮೇ 12ಕ್ಕೆ ಷೇರು ಹಂಚಿಕೆ

ಪಿಟಿಐ
Published 9 ಮೇ 2022, 15:56 IST
Last Updated 9 ಮೇ 2022, 15:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳಿಗೆ ಬಿಡ್ ಸಲ್ಲಿಸಿದವರ ಖಾತೆಗೆ ಷೇರುಗಳು ಮೇ 12ರಂದು ಜಮಾ ಆಗಲಿವೆ. ಎಲ್‌ಐಸಿ ಷೇರುಗಳು ಮೇ 17ರಿಂದ ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಲಿವೆ ಎಂದು ಸಾರ್ವಜನಿಕ ಹೂಡಿಕೆ ಮತ್ತು ಆಸ್ತಿ ನಿರ್ವಹಣಾ ಖಾತೆಯ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ತಿಳಿಸಿದ್ದಾರೆ.

ಎಲ್‌ಐಸಿ ಐಪಿಒ ಬಿಡ್ ಸಲ್ಲಿಸುವ ಅವಧಿ ಪೂರ್ಣಗೊಂಡ ನಂತರದಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ‘ನಾವು ವಿದೇಶಿ ಹೂಡಿಕೆದಾರರ ಮೇಲೆ ಮಾತ್ರವೇ ಅವಲಂಬಿತರಾಗಿಲ್ಲ. ದೇಶಿ ಹೂಡಿಕೆದಾರರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದಿದ್ದಾರೆ.

ಎಲ್ಐಸಿ ಐಪಿಒ ಪ್ರಕ್ರಿಯೆಯಲ್ಲಿ ಲಭ್ಯವಿದ್ದ ಷೇರುಗಳಿಗೆ ಸರಿಸುಮಾರು ಮೂರು ಪಟ್ಟು ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ₹ 21 ಸಾವಿರ ಕೋಟಿ ಬಂಡವಾಳ ಸಂಗ್ರಹ ಆಗಿದೆ. ಇದರಿಂದಾಗಿ, ಐಪಿಒ ಮೂಲಕ ಅತಿ ಹೆಚ್ಚು ಬಂಡವಾಳ ಸಂಗ್ರಹಿಸಿದ ದೇಶದ ಮೊದಲ ಕಂಪನಿ ಆಗಿ ಎಲ್‌ಐಸಿ ಹೊರಹೊಮ್ಮಿದೆ.

ADVERTISEMENT

ಷೇರುಪೇಟೆಯಲ್ಲಿ ಸೋಮವಾರ ಸಂಜೆ 7 ಗಂಟೆಯವರೆಗಿನ ಮಾಹಿತಿಯ ಪ್ರಕಾರ, ಲಭ್ಯವಿದ್ದ 16.20 ಕೋಟಿ ಷೇರುಗಳಿಗೆ ಪ್ರತಿಯಾಗಿ 47.83 ಕೋಟಿ ಷೇರುಗಳಿಗೆ ಬಿಡ್ ಸಲ್ಲಿಕೆಯಾಗಿದೆ. ರಿಟೇಲ್‌ ಹೂಡಿಕೆದಾರರಿಗೆ 6.9 ಕೋಟಿ ಷೇರುಗಳನ್ನು ಮೀಸಲಿಡಲಾಗಿತ್ತು. 13.77 ಕೋಟಿ ಷೇರುಗಳಿಗೆ ಅರ್ಜಿ ಸಲ್ಲಿಕೆ ಆಗಿದೆ.

ಅರ್ಹ ಸಾಂಸ್ಥಿಕ ಹೂಡಿಕೆದಾರರ (ಕ್ಯುಐಬಿ) ವಿಭಾಗದಲ್ಲಿ 2.83ಪಟ್ಟು ಹೆಚ್ಚು ಅರ್ಜಿ ಸಲ್ಲಿಕೆ ಆಗಿದೆ. 3.95 ಕೋಟಿ ಷೇರುಗಳಿಗೆ ಬಿಡ್‌ ಕರೆಯಲಾಗಿತ್ತು. 11.20 ಕೋಟಿ ಷೇರುಗಳಿಗೆ ಅರ್ಜಿ ಸಲ್ಲಿಕೆ ಆಗಿದೆ.

ಸಾಂಸ್ಥಿಕೇತರ ಹೂಡಿಕೆದಾರರ ವಿಭಾಗವು 2.91 ಪಟ್ಟು ಹೆಚ್ಚು ಅರ್ಜಿ ಸ್ವೀಕರಿಸಿದೆ. ಪಾಲಿಸಿದಾರರ ವಿಭಾಗವು 6 ಪಟ್ಟು ಮತ್ತು ಸಿಬ್ಬಂದಿ ವಿಭಾಗವು 4.4 ಪಟ್ಟು ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.