ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಇನ್ನಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಡಿ ಇರಿಸಿದೆ, ಷೇರು ವಿಕ್ರಯ ಇಲಾಖೆಯು ಇದರ ವಿವರಗಳನ್ನು ಅಂತಿಮಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ಎಲ್‌ಐಸಿಯಲ್ಲಿ ಕೇಂದ್ರ ಸರ್ಕಾರವು ಈಗ ಶೇ 96.5ರಷ್ಟು ಷೇರು ಹೊಂದಿದೆ. ಐಪಿಒ ಪ್ರಕ್ರಿಯೆಯ ಮೂಲಕ ಕೇಂದ್ರವು ಶೇ 3.5ರಷ್ಟು ಷೇರುಗಳನ್ನು 2022ರಲ್ಲಿ ಮಾರಾಟ ಮಾಡಿತ್ತು. ಈ ಷೇರು ಮಾರಾಟದ ಮೂಲಕ ಸರ್ಕಾರವು ₹21 ಸಾವಿರ ಕೋಟಿ ಸಂಗ್ರಹಿಸಿತ್ತು.
ಎಲ್‌ಐಸಿಯ ಇನ್ನಷ್ಟು ಷೇರುಗಳನ್ನು ಒಎಫ್‌ಎಸ್ ವಿಧಾನದ ಮೂಲಕ ಮಾರಾಟ ಮಾಡುವ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ, ಚರ್ಚೆಗಳು ಇನ್ನೂ ಆರಂಭಿಕ ಹಂತದಲ್ಲಿ ಇವೆ ಎಂದು ಗೊತ್ತಾಗಿದೆ. ‘ಮಾರುಕಟ್ಟೆಯ ಪರಿಸ್ಥಿತಿಯನ್ನು ಪರಿಶೀಲಿಸಿ, ಷೇರು ಮಾರಾಟವನ್ನು ಪೂರ್ಣಗೊಳಿಸುವುದು ಷೇರು ವಿಕ್ರಯ ಇಲಾಖೆಯ ಹೊಣೆ’ ಎಂದು ಮೂಲವೊಂದು ತಿಳಿಸಿದೆ.
2017ರ ಮೇ 16ಕ್ಕೆ ಮೊದಲು ಎಲ್‌ಐಸಿಯಲ್ಲಿ ಸಾರ್ವಜನಿಕರ ಷೇರು ಮಾಲೀಕತ್ವ ಪ್ರಮಾಣವು ಶೇ 10ಕ್ಕೆ ಹೆಚ್ಚಬೇಕಿದೆ. ಇದು ಸಾಧ್ಯವಾಗಬೇಕು ಎಂದಾದರೆ ಕೇಂದ್ರವು ಇನ್ನೂ ಶೇ 6.5ರಷ್ಟು ಷೇರುಗಳನ್ನು ಮಾರಾಟ ಮಾಡಬೇಕಿದೆ.
ಎಷ್ಟು ಪ್ರಮಾಣದಲ್ಲಿ ಷೇರು ಮಾರಾಟ ಮಾಡಲಾಗುತ್ತದೆ, ಯಾವಾಗ ಮಾಡಲಾಗುತ್ತದೆ ಎಂಬುದನ್ನು ಮುಂದೆ ಸೂಕ್ತ ಸಂದರ್ಭದಲ್ಲಿ ತೀರ್ಮಾನಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.