ADVERTISEMENT

ಲಾಕ್‌ಡೌನ್‌ನಿಂದ ಪ್ರತಿವಾರ ₹ 9 ಸಾವಿರ ಕೋಟಿ ನಷ್ಟ: ವರದಿ

ಪಿಟಿಐ
Published 14 ಏಪ್ರಿಲ್ 2021, 11:42 IST
Last Updated 14 ಏಪ್ರಿಲ್ 2021, 11:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಆರ್ಥಿಕ ವ್ಯವಸ್ಥೆಯ ಪ್ರಮುಖ ಕೇಂದ್ರಗಳಲ್ಲಿ ಜಾರಿಗೆ ತರುತ್ತಿರುವ ಲಾಕ್‌ಡೌನ್‌ನಿಂದಾಗಿ ಅರ್ಥ ವ್ಯವಸ್ಥೆಗೆ ಪ್ರತಿ ವಾರ ಅಂದಾಜು ಸರಾಸರಿ ₹ 9 ಸಾವಿರ ಕೋಟಿ (1.25 ಬಿಲಿಯನ್ ಅಮೆರಿಕನ್ ಡಾಲರ್) ನಷ್ಟ ಆಗಬಹುದು ಎಂದು ವರದಿಯೊಂದು ಹೇಳಿದೆ. ಅಲ್ಲದೆ, ಈ ನಿರ್ಬಂಧಗಳಿಂದಾಗಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇಕಡ 1.4ರಷ್ಟು ಕಡಿಮೆ ಆಗಬಹುದು ಎಂದು ಕೂಡ ವರದಿಯು ಹೇಳಿದೆ.

ಈಗ ಜಾರಿಗೆ ಬಂದಿರುವ ನಿರ್ಬಂಧಗಳು ಮೇ ತಿಂಗಳ ಕೊನೆಯವರೆಗೂ ಜಾರಿಯಲ್ಲಿ ಇದ್ದರೆ ಆರ್ಥಿಕ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಆಗುವ ನಷ್ಟವು ₹ 78.91 ಸಾವಿರ ಕೋಟಿ (10.5 ಬಿಲಿಯನ್ ಅಮೆರಿಕನ್ ಡಾಲರ್) ಆಗಬಹುದು ಎಂದು ಬ್ರಿಟನ್ನಿನ ಬ್ರೋಕರೇಜ್ ಸಂಸ್ಥೆ ಬರ್ಕ್‌ಲೇಸ್‌ ಅಂದಾಜಿಸಿದೆ.

ದೇಶದಲ್ಲಿ ಕೋವಿಡ್–19 ಪ್ರಕರಣಗಳ ಸಂಖ್ಯೆಯು ಜಾಸ್ತಿ ಆಗುತ್ತಿರುವ ಕಾರಣ ಮಹಾರಾಷ್ಟ್ರ ರಾಜ್ಯದಲ್ಲಿ, ದೆಹಲಿಯಲ್ಲಿ ಜನರ ಸಂಚಾರದ ಮೇಲೆ, ಆರ್ಥಿಕ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಗಿದೆ.

ADVERTISEMENT

ದೇಶದಲ್ಲಿ ಬಹುತೇಕ ಕೋವಿಡ್–19 ಪ್ರಕರಣಗಳು ಎಂಟು ರಾಜ್ಯಗಳಿಂದ ವರದಿ ಆಗುತ್ತಿವೆ. ಈ ಎಂಟು ರಾಜ್ಯಗಳ ಪೈಕಿ ಬಹುತೇಕ ರಾಜ್ಯಗಳು ಆರ್ಥಿಕವಾಗಿ ಹೆಚ್ಚು ಚಟುವಟಿಕೆಯಿಂದ ಕೂಡಿರುವಂಥವೂ ಹೌದು. ಹಾಗಾಗಿಯೇ, ಈ ರಾಜ್ಯಗಳಲ್ಲಿ ಜಾರಿಗೆ ಬರುವ ನಿರ್ಬಂಧಗಳು ಅರ್ಥ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ.

ಆರ್ಥಿಕ ಚಟುವಟಿಕೆಯ ಕೇಂದ್ರಗಳಲ್ಲಿ ಲಾಕ್‌ಡೌನ್‌, ಜನರ ಸಂಚಾರದ ಮೇಲೆ ನಿರ್ಬಂಧ, ರಾತ್ರಿ ಕರ್ಫ್ಯೂನಂತಹ ಕ್ರಮಗಳನ್ನು ಕಳೆದ ಕೆಲವು ದಿನಗಳಿಂದ ಜಾರಿಗೆ ತರುತ್ತಿರುವ ಕಾರಣದಿಂದಾಗಿ ಪ್ರತಿ ವಾರ ₹ 9 ಸಾವಿರ ಕೋಟಿ ನಷ್ಟ ಉಂಟಾಗಬಹುದು. ನಷ್ಟದ ಮೊತ್ತ ₹ 3.9 ಸಾವಿರ ಕೋಟಿ ಮಾತ್ರ ಎಂದು ವಾರದ ಹಿಂದೆ ಅಂದಾಜಿಸಲಾಗಿತ್ತು.

ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕೋವಿಡ್–19 ಪ್ರಕರಣಗಳು ಜಾಸ್ತಿ ಆಗುತ್ತಿವೆ. ದೇಶದ ಶೇಕಡ 60ರಷ್ಟು ಅರ್ಥ ವ್ಯವಸ್ಥೆಯು ಈಗ ಒಂದಲ್ಲ ಒಂದು ಬಗೆಯ ಸಂಚಾರ ನಿರ್ಬಂಧಕ್ಕೆ ಒಳಪಟ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

2021–22ನೇ ಹಣಕಾಸು ವರ್ಷದಲ್ಲಿ ಭಾರತದ ಅರ್ಥ ವ್ಯವಸ್ಥೆಯು ಶೇಕಡ 11ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಈ ಹಿಂದೆ ಹೇಳಿದ್ದನ್ನು ಬರ್ಕ್‌ಲೇಸ್‌ನ ಅರ್ಥಶಾಸ್ತ್ರಜ್ಞರು ಪುನರುಚ್ಚರಿಸಿದ್ದಾರೆ. ಆದರೆ, ನಿರ್ಬಂಧಗಳನ್ನು ಇನ್ನಷ್ಟು ಬಿಗಿಗೊಳಿಸಿದರೆ ಅಥವಾ ಆರ್ಥಿಕತೆಯ ಇನ್ನಷ್ಟು ಕೇಂದ್ರಗಳಲ್ಲಿ ನಿರ್ಬಂಧಗಳು ಜಾರಿಗೆ ಬಂದರೆ ಜಿಡಿಪಿ ಬೆಳವಣಿಗೆ ಕಡಿಮೆ ಆಗುವ ಅಪಾಯವೂ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.