ADVERTISEMENT

ಮಹೀಂದ್ರಾ: ಮೊದಲ ತ್ರೈಮಾಸಿಕದಲ್ಲಿ 87,000 ವಾಹನ, 30,000 ಟ್ರ್ಯಾಕ್ಟರ್ ನಷ್ಟ

ಪಿಟಿಐ
Published 3 ಜೂನ್ 2020, 10:14 IST
Last Updated 3 ಜೂನ್ 2020, 10:14 IST
ಮಹೀಂದ್ರಾ ಟ್ಯಾಕ್ಟರ್‌–ಸಾಂದರ್ಭಿಕ ಚಿತ್ರ
ಮಹೀಂದ್ರಾ ಟ್ಯಾಕ್ಟರ್‌–ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ವೈರಸ್‌ ಸೋಂಕು ನಿಯಂತ್ರಿಸುವ ಸಲುವಾಗಿ ಜಾರಿಯಾದ ಲಾಕ್‌ಡೌನ್‌ನಿಂದ ತಯಾರಿಕಾ ಘಟಕಗಳಲ್ಲಿ ಕಾರ್ಯ ಸ್ಥಗಿತಗೊಂಡ ಪರಿಣಾಮ, 87,000 ವಾಹನಗಳು ಹಾಗೂ 30,000 ಟ್ಯಾಕ್ಟರ್‌ಗಳಷ್ಟು ತಯಾರಿಕೆ ನಷ್ಟ ಉಂಟಾಗಿದೆ ಎಂದು ಮಹೀಂದ್ರಾ ಆ್ಯಂಡ್ ಮಹೀಂದ್ರಾ ಹೇಳಿದೆ.

ಮಾರ್ಚ್‌ 25ರಿಂದ ತಯಾರಿಕಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿ, ಮಾರ್ಚ್‌ನಲ್ಲೇ 23,400 ವಾಹನಗಳು ಹಾಗೂ 14,700 ಟ್ರ್ಯಾಕ್ಟರ್‌ಗಳ ನಷ್ಟ ಉಂಟಾಗಿರುವುದಾಗಿ ಅಂದಾಜಿಸಿತ್ತು.

ಕೋವಿಡ್‌–19ನಿಂದಾಗಿ 2020–21ರ ಮೊದಲ ತ್ರೈಮಾಸಿಕದಲ್ಲಿ 87,000 ವಾಹನಗಳು ಹಾಗೂ ಸುಮಾರು 30,000 ಟ್ರ್ಯಾಕ್ಟರ್‌ಗಳಷ್ಟು ನಷ್ಟ ಆಗಿರುವುದಾಗಿ ಕಂಪನಿ ಅಂದಾಜಿಸಿದೆ. ತಯಾರಿಕೆ ಮತ್ತು ಮಾರಾಟ ಪ್ರಮಾಣ ಕುಸಿತವು ಆದಾಯ ಹಾಗೂ ಲಾಭಾಂಶ ಗಳಿಕೆಯ ಮೇಲೆ ಪರಿಣಾಮ ಬೀರಲಿದೆ ಎಂದಿದೆ.

ADVERTISEMENT

ರಾಬಿ ಬೆಳೆ, ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಘೋಷಣೆ ಹಾಗೂ ಮುಂಗಾರು ಮಳೆ ಉತ್ತಮವಾಗುವುದರಿಂದ ಬೆಳೆ ಪ್ರಮಾಣ ಹೆಚ್ಚುವ ಸಾಧ್ಯತೆ, ಸರ್ಕಾರದ ಹಲವು ಕ್ರಮಗಳಿಂದಾಗಿ ಟ್ರ್ಯಾಕ್ಟರ್‌ಗೆ ಬೇಡಿಕೆ ಉಂಟಾಗುವ ಸಕಾರಾತ್ಮ ವಾತಾವರಣ ನಿರ್ಮಾಣವಾಗಿರುವುದಾಗಿ ಕಂಪನಿ ನಿರೀಕ್ಷೆ ವ್ಯಕ್ತಪಡಿಸಿದೆ.

ಏಪ್ರಿಲ್‌ 14ರಿಂದಲೇ ಟ್ರ್ಯಾಕ್ಟರ್‌ ಮಾರಾಟ ಪುನರಾರಂಭಗೊಂಡಿದೆ. ಶೇ 75ರಷ್ಟು ಡೀಲರ್‌ಶಿಪ್‌ಗಳು ಕಾರ್ಯಾಚರಣೆ ಆರಂಭಿಸಿವೆ. ಗ್ರಾಮೀಣ ಭಾಗದಲ್ಲಿ ಬಹುಬೇಗ ಮಾರಾಟ ಚೇತರಿಕೆಯಾಗಲಿದ್ದು, ನಗರ ಪ್ರದೇಶಗಳಲ್ಲಿ ಸಾಮಾನ್ಯ ಸ್ಥಿತಿ ತಲುಪಲು ಹೆಚ್ಚುವರಿ ಸಮಯ ಬೇಕಾಗಬಹುದು ಎಂದು ಕಂಪನಿ ಹೇಳಿದೆ.

ನಗದು ಹರಿವು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಕಂಪನಿ ಏಪ್ರಿಲ್‌ನಲ್ಲಿ ₹2,000 ಕೋಟಿ ಮೌಲ್ಯದ ಪರಿವರ್ತಿಸಲಾಗದ ಸಾಲಪತ್ರಗಳು ಹಾಗೂ ಸುಮಾರು ₹1,000 ಕೋಟಿ ಮೊತ್ತದ ವಾಣಿಜ್ಯ ಪತ್ರಗಳನ್ನು ವಿತರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.