ಅಡುಗೆ ಅನಿಲ ದರ ಏರಿಕೆ
–ಪಿಟಿಐ ಚಿತ್ರ
ನವದೆಹಲಿ: ಮನೆ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರವು ₹50 ಹೆಚ್ಚಿಸಿದೆ. ಪರಿಷ್ಕೃತ ದರ ಮಂಗಳವಾರದಿಂದ ಅನ್ವಯವಾಗಲಿದೆ.
ಅಡುಗೆ ಅನಿಲ ಬೆಲೆಯಲ್ಲಿನ ಹೆಚ್ಚಳವು ಉಜ್ವಲಾ ಯೋಜನೆಯ ಫಲಾನುಭವಿಗಳು ಮತ್ತು ಸಾಮಾನ್ಯ ಬಳಕೆದಾರರಿಗೆ ಅನ್ವಯಿಸುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ತಿಳಿಸಿದ್ದಾರೆ.
ಇದರ ಪರಿಣಾಮವಾಗಿ ನವದೆಹಲಿಯಲ್ಲಿ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯು ₹853ಕ್ಕೆ ತಲುಪಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಇದೇ ಎಲ್‌ಪಿಜಿ ಸಿಲಿಂಡರ್ ದರ ಪ್ರಸ್ತುತ ₹503 ರಿಂದ ₹553ಕ್ಕೆ ಏರಿಕೆಯಾಗಿದೆ.
ಎಲ್‌ಪಿಜಿ ಸಿಲಿಂಡರ್ ದರವನ್ನು ಕಳೆದ ವರ್ಷ ಮಾರ್ಚ್‌ನಲ್ಲಿ ಕೊನೆಯದಾಗಿ ಪರಿಷ್ಕರಿಸಲಾಗಿತ್ತು. ಆಗ ಬೆಲೆಯನ್ನು ₹100 ಕಡಿತಗೊಳಿಸಲಾಗಿತ್ತು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೌದಿ ಸಿಪಿ (ಎಲ್‌ಪಿಜಿ ದರ ನಿಗದಿಗೆ ಆಧಾರವಾಗಿರುವ ದರ) ಕಳೆದ ಎರಡು ವರ್ಷಗಳಲ್ಲಿ ಶೇ 63ರಷ್ಟು ಏರಿಕೆಯಾಗಿದೆ. 2023ರ ಜುಲೈನಲ್ಲಿ ಟನ್‌ಗೆ 385 ಡಾಲರ್ (₹33 ಸಾವಿರ) ಇದ್ದಿದ್ದು 2025ರ ಫೆಬ್ರುವರಿಗೆ 629 ಡಾಲರ್‌ಗೆ (₹54 ಸಾವಿರ) ಏರಿಕೆಯಾಗಿದೆ ಎಂದು ಸಚಿವರು ತಿಳಿಸಿದರು.
‘ಇದರಿಂದ ದೆಹಲಿಯಲ್ಲಿ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್‌ಗೆ ₹1,028 ಬೆಲೆ ನಿಗದಿಪಡಿಸಬೇಕಿತ್ತು. ಆದರೆ ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳು ಇದುವರೆಗೂ ಬೆಲೆಯನ್ನು ಸರಿದೂಗಿಸಿಕೊಳ್ಳುತ್ತಿದ್ದವು’ ಎಂದರು.
‘ಎಲ್‌ಪಿಜಿಯನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಗೆ ಮಾರಾಟ ಮಾಡಿದ್ದಕ್ಕಾಗಿ ಕಂಪನಿಗಳು ₹41,338 ಕೋಟಿ ನಷ್ಟ ಅನುಭವಿಸಿವೆ. ಇನ್ನಷ್ಟು ನಷ್ಟವನ್ನು ತಪ್ಪಿಸಲು ಬೆಲೆಯನ್ನು ಅಲ್ಪ ಹೆಚ್ಚಿಸಲಾಗಿದೆ’ ಎಂದು ಕಾರಣ ನೀಡಿದರು.
‘ಪ್ರಸ್ತುತ ಬೆಲೆಯಲ್ಲಿ, ಉಜ್ವಲಾ ಯೋಜನೆ ಫಲಾನುಭವಿ ಕುಟುಂಬಗಳಿಗೆ ಎಲ್‌ಪಿಜಿ ಬಳಸಿ ದಿನಕ್ಕೆ ಅಡುಗೆ ಮಾಡಲು ಸುಮಾರು ₹6.10 ಹಾಗೂ ಸಾಮಾನ್ಯ ಬಳಕೆದಾರರಿಗೆ ₹14.58 ಖರ್ಚಾಗುತ್ತದೆ. ಇದು ತುಂಬಾ ದುಬಾರಿಯೇನೂ ಅಲ್ಲ’ ಎಂದರು.
ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ₹2 ಹೆಚ್ಚಳ
ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ₹2 ಹೆಚ್ಚಿಸಿದೆ. ಆದರೆ ಅಬಕಾರಿ ಸುಂಕದ ಹೆಚ್ಚಳವು ಚಿಲ್ಲರೆ ಮಾರಾಟದ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
‘ಅಬಕಾರಿ ಸುಂಕ ಏರಿಕೆಯಾದರೂ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಮಾರಾಟ ಬೆಲೆಯಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ ಎಂದು ತೈಲೋತ್ಪನ್ನ ಕಂಪನಿಗಳು ತಿಳಿಸಿವೆ’ ಎಂದು ಸಚಿವಾಲಯವು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಲೀಟರ್‌ಗೆ ₹11 ರಿಂದ ₹13ಕ್ಕೆ ಹಾಗೂ ಡೀಸೆಲ್ ಮೇಲಿನ ಸುಂಕ ಲೀಟರ್‌ಗೆ ₹8 ರಿಂದ ₹10ಕ್ಕೆ ಏರಿಕೆಯಾಗಿದೆ.
ಈ ಹೆಚ್ಚಳದ ನಂತರ ಪೆಟ್ರೋಲ್ ಮೇಲಿನ ಕೇಂದ್ರದ ಒಟ್ಟು ತೆರಿಗೆಗಳು ಲೀಟರ್‌ಗೆ ₹21.9 ಹಾಗೂ ಡೀಸೆಲ್ ಮೇಲಿನ ತೆರಿಗೆಗಳು ₹17.80ಕ್ಕೆ ತಲುಪಿವೆ.
ಸಿಎನ್‌ಜಿ ದರ ₹1 ಏರಿಕೆ
ನವದೆಹಲಿ ಸೇರಿದಂತೆ ದೇಶದ ಹಲವು ನಗರಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ದರವನ್ನು ಅನಿಲ ಸಂಸ್ಥೆಗಳು ಪ್ರತಿ ಕೆ.ಜಿಗೆ ₹1 ಹೆಚ್ಚಿಸಿವೆ.
ರಾಷ್ಟ್ರದ ರಾಜಧಾನಿಯಲ್ಲಿ ಸಿಎನ್‌ಜಿ ದರ ಪ್ರತಿ ಕೆ.ಜಿಗೆ ₹75.09 ಆಗಿದೆ ಎಂದು ನವದೆಹಲಿಯ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ‘ಎಕ್ಸ್’ನಲ್ಲಿ ತಿಳಿಸಿದೆ.
‘ಬಿಜೆಪಿ ಕಪಾಳಕ್ಕೆ ಏಟು’
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಹೆಚ್ಚಿಸುವ ಮೂಲಕ ಜನಾಕ್ರೋಶ ಯಾತ್ರೆ ಆರಂಭಿಸಿರುವ ರಾಜ್ಯದ ಬಿಜೆಪಿ ನಾಯಕರಿಗೆ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
‘ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ಆರ್ಥಿಕ ನೀತಿಯೇ ಕಾರಣ ಎಂದು ನಾವು ಹೇಳುತ್ತಲೇ ಬಂದಿರುವ ಸತ್ಯವನ್ನು ಪ್ರಧಾನಿ ಅವರೇ ದೇಶದ ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ತೆರಿಗೆ ₹2, ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ₹50 ಏರಿಕೆ ಮಾಡಿದ್ದಾರೆ. ಈಗ ರಾಜ್ಯದ ಬಿಜೆಪಿ ನಾಯಕರ ಪ್ರತಿಕ್ರಿಯೆ ಏನು? ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಯುತ್ತಿದ್ದರೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಒಂದೇ ಸಮನೆ ಏರಿಸುತ್ತಿರುವುದು ಏಕೆ ಎಂಬ ವಿಷಯವನ್ನು ರಾಜ್ಯದ ಜನರಿಗೆ ತಿಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.