ಚಿನ್ನದ ಆಭರಣ
ಪಿಟಿಐ ಚಿತ್ರ
ಲಖನೌ: ಟರ್ಕಿಯಿಂದ ಭಾರತಕ್ಕೆ ಪೂರೈಕೆಯಾಗುವ ಸೇಬು ಮತ್ತು ಅಮೃತಶಿಲೆಗೆ ತಟ್ಟಿರುವ ಬಹಿಷ್ಕಾರದ ಬಿಸಿಯು, ಈಗ ಆ ದೇಶದ ಚಿನ್ನಾಭರಣಗಳಿಗೂ ವಿಸ್ತರಿಸಿದೆ.
ಉತ್ತರ ಪ್ರದೇಶದ ಲಖನೌದಲ್ಲಿ ವರ್ತಕರು ಟರ್ಕಿ ಆಭರಣಗಳ ಖರೀದಿ, ಮಾರಾಟ ಮತ್ತು ಪ್ರದರ್ಶನಕ್ಕೆ ಬಹಿಷ್ಕಾರ ಹಾಕಿದ್ದಾರೆ. ಸಂಪೂರ್ಣವಾಗಿ ಅಲ್ಲಿನ ಆಭರಣಗಳ ಆಮದನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತವು ‘ಸಿಂಧೂರ ಕಾರ್ಯಾಚರಣೆ’ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಟರ್ಕಿ ನಿರ್ಮಿಸಿದ ಡ್ರೋನ್‌ಗಳನ್ನು ಬಳಸಲಾಗಿತ್ತು. ಇದನ್ನು ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಟರ್ಕಿಯಿಂದ ಪೂರೈಕೆಯಾಗುವ ಸರಕುಗಳ ಬಹಿಷ್ಕಾರಕ್ಕೆ ಅಭಿಯಾನ ನಡೆಯುತ್ತಿದೆ.
‘ಅಕ್ಷಯ ತೃತೀಯದಂದು ಟರ್ಕಿ ಆಭರಣಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಆದರೆ, ಆ ದೇಶವು ಪಾಕಿಸ್ತಾನಕ್ಕೆ ಬೆಂಬಲ ನೀಡಿದೆ. ಟರ್ಕಿ ಆಭರಣಗಳ ಖರೀದಿಗೆ ಗ್ರಾಹಕರು ಮುಂದಾಗುವುದಿಲ್ಲ. ಹಾಗಾಗಿ, ಆಮದು ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಲಖನೌ ಚೌಕ್ ಸರಾಫ್ ಅಸೋಸಿಯೇಷನ್ ಉಪಾಧ್ಯಕ್ಷ ಅದೀಶ್ ಜೈನ್ ಅವರು, ಪಿಟಿಐಗೆ ತಿಳಿಸಿದ್ದಾರೆ.
‘ಅಲ್ಲಿಂದ ಪ್ರಮುಖವಾಗಿ ನೆಕ್ಲೇಸ್, ಉಂಗುರ ಮತ್ತು ಕಿವಿಯೋಲೆ ಆಮದಾಗುತ್ತವೆ. ಇಲ್ಲಿನ ಮಾರುಕಟ್ಟೆಯಲ್ಲಿ ಪ್ರತಿದಿನ ಮಾರಾಟವಾಗುವ 20 ನೆಕ್ಲೇಸ್‌ಗಳ ಪೈಕಿ 5 ಟರ್ಕಿ ನೆಕ್ಲೇಸ್‌ಗಳಿರುತ್ತವೆ’ ಎಂದು ವಿವರಿಸಿದ್ದಾರೆ.
‘ಟರ್ಕಿಯಿಂದ ವಿನ್ಯಾಸಗೊಂಡು ಬರುತ್ತಿದ್ದ ಆಭರಣಗಳ ಮಾರಾಟಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೆವು. ಸದ್ಯ ಸಂಪೂರ್ಣವಾಗಿ ಸ್ಥಗಿತಗೊಳಿಸಲು ಮುಂದಾಗಿದ್ದೇವೆ’ ಎಂದು ಲಖನೌ ಮಹಾನಗರದ ಸರಾಫ್ ಅಸೋಸಿಯೇಷನ್ ಅಧ್ಯಕ್ಷ ಮನೀಶ್ ಕುಮಾರ್ ವರ್ಮಾ ತಿಳಿಸಿದ್ದಾರೆ.
ಸೇಬು ಮಾರಾಟ ಸ್ಥಗಿತ
ಜೈಪುರ: ರಾಜಸ್ಥಾನದ ಆಳ್ವಾರ್ ಹಣ್ಣಿನ ಮಾರುಕಟ್ಟೆಯಲ್ಲಿ ವರ್ತಕರು, ಟರ್ಕಿ ಸೇಬುಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದಾರೆ.
ಈ ಮೊದಲು ಅಜ್ಮೀರ್‌ನ ವರ್ತಕರು ಟರ್ಕಿಯ ಅಮೃತಶಿಲೆಗಳ ಮಾರಾಟವನ್ನು ಬಹಿಷ್ಕರಿಸಿದ್ದರು.
ಗ್ರಾಹಕರ ನಿಲುವಿಗೆ ನಾವು ಮನ್ನಣೆ ನೀಡಬೇಕಿದೆ. ಅಲ್ಲಿಂದ ಪೂರೈಕೆಯಾಗುವ ಸರಕುಗಳಿಗೆ ಬಹಿಷ್ಕಾರ ಹೇರಿ ಆ ದೇಶದ ಆರ್ಥಿಕತೆಗೆ ಪೆಟ್ಟು ನೀಡುವುದು ನಮ್ಮ ಗುರಿಯಾಗಿದೆ. ಹಾಗಾಗಿ, ಆಳ್ವಾರ್‌ನ ಹಣ್ಣಿನ ಮಾರುಕಟ್ಟೆ ಸಂಘವು ಈ ನಿರ್ಧಾರ ಕೈಗೊಂಡಿದೆ ಎಂದು ವರ್ತಕರು ತಿಳಿಸಿದ್ದಾರೆ.
‘ಮಾರ್ಚ್‌ನಿಂದ ಜೂನ್‌ವರೆಗೆ ಇಲ್ಲಿನ ಮಾರುಕಟ್ಟೆಗೆ ಪ್ರತಿ ದಿನ 15 ಟನ್‌ನಷ್ಟು ಟರ್ಕಿ ಸೇಬುಗಳು ಇಲ್ಲಿನ ಮಾರುಕಟ್ಟೆಗೆ ಆವಕವಾಗುತ್ತವೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸೌರಭ್ ಕಲ್ರಾ ತಿಳಿಸಿದ್ದಾರೆ.
‘ಶುಕ್ರವಾರದಿಂದಲೇ ಅಂಗಡಿಗಳ ಮುಂದೆ ಟರ್ಕಿ ಸೇಬಿಗೆ ಬಹಿಷ್ಕಾರದ ಫಲಕಗಳನ್ನು ಪ್ರದರ್ಶಿಸಿದ್ದೇವೆ. ಈ ಮೂಲಕ ಗ್ರಾಹಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
‘ಟರ್ಕಿ ಸೇಬುಗಳ ಮಾರಾಟ ಸ್ಥಗಿತದಿಂದ ಮಾರುಕಟ್ಟೆಯಲ್ಲಿ ಆಗುವ ಕೊರತೆ ನೀಗಿಸಲು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ದಕ್ಷಿಣ ಆಫ್ರಿಕಾದ ಸೇಬುಗಳ ಮಾರಾಟಕ್ಕೆ ಮುಂದಾಗಿದ್ದೇವೆ. ಶೈತ್ಯಾಗಾರಗಳಲ್ಲಿ ಈ ಸೇಬುಗಳ ದಾಸ್ತಾನು ಸಾಕಷ್ಟಿದೆ’ ಎಂದು ಸಂಘದ ಕಾರ್ಯದರ್ಶಿ ಪಂಕಜ್ ಸೈನಿ ತಿಳಿಸಿದ್ದಾರೆ.
ಜಿಜೆಸಿ, ಸಿಎಐಟಿ ಬೆಂಬಲ
ಮುಂಬೈ: ಕೇಂದ್ರ ಸರ್ಕಾರವು ಟರ್ಕಿ ಮತ್ತು ಅಜರ್‌ಬೈಜಾನ್ ಜತೆಗಿನ ಎಲ್ಲಾ ವ್ಯಾಪಾರ ಒಪ್ಪಂದಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕಿದೆ ಎಂದು ಅಖಿಲ ಭಾರತ ಹರಳು ಮತ್ತು ಆಭರಣ ಮಂಡಳಿ (ಜಿಜೆಸಿ) ಆಗ್ರಹಿಸಿದೆ.
‘ನಮಗೆ ರಾಷ್ಟ್ರದ ಹಿತಾಸಕ್ತಿ ಮುಖ್ಯವಾಗಿದೆ. ಹಾಗಾಗಿ, ಈ ಎರಡು ದೇಶಗಳ ಜೊತೆಗಿನ ಎಲ್ಲಾ ವಹಿವಾಟುಗಳನ್ನು
ಸ್ಥಗಿತಗೊಳಿಸಲು ಆಭರಣ ಮಾರಾಟಗಾರರು, ತಯಾರಕರು, ವರ್ತಕರು ಮತ್ತು ಸಗಟು ಮಾರಾಟಗಾರರಿಗೆ ಸೂಚಿಸಲಾಗಿದೆ’ ಎಂದು ಮಂಡಳಿ ಅಧ್ಯಕ್ಷ ರಾಜೇಶ್ ರೋಕ್ಡೆ ತಿಳಿಸಿದ್ದಾರೆ.
ಎರಡು ದೇಶಗಳ ಜೊತೆಗಿನ ವ್ಯಾಪಾರ ವಹಿವಾಟಿಗೆ ನಿರ್ಬಂಧ ಹೇರಬೇಕು ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (ಸಿಎಐಟಿ) ಕೂಡ ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.