ADVERTISEMENT

ದೇಶದಲ್ಲಿ 24 ದಶಲಕ್ಷ ಟನ್‌ ಮಾವು ಉತ್ಪಾದನೆ ನಿರೀಕ್ಷೆ

ಪಿಟಿಐ
Published 3 ಏಪ್ರಿಲ್ 2024, 15:10 IST
Last Updated 3 ಏಪ್ರಿಲ್ 2024, 15:10 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ದೇಶದಲ್ಲಿ ಪ್ರಸಕ್ತ ಮಾರುಕಟ್ಟೆ ವರ್ಷದಲ್ಲಿ (ಜುಲೈನಿಂದ ಜೂನ್‌ವರೆಗೆ) 24 ದಶಲಕ್ಷ ಟನ್‌ನಷ್ಟು ಮಾವಿನ ಉತ್ಪಾದನೆಯಾಗುವ ನಿರೀಕ್ಷೆಯಿದೆ. 

ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ಪಾದನೆಯಲ್ಲಿ ಶೇ 14ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅಧೀನದಲ್ಲಿರುವ ಕೇಂದ್ರೀಯ ಉಪೋಷ್ಣ ವಲಯದ ತೋಟಗಾರಿಕೆ ಸಂಸ್ಥೆ (ಐಸಿಎಆರ್‌–ಸಿಐಎಸ್‌ಎಚ್‌) ತಿಳಿಸಿದೆ.

ADVERTISEMENT

ಏಪ್ರಿಲ್‌ನಿಂದ ಮೇ ತಿಂಗಳವರೆಗೆ ಬಿಸಿ ಗಾಳಿ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಆದರೆ, ಇದು ಮಾವಿನ ಇಳುವರಿ ಮೇಲೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ ಎಂದು ಸಂಸ್ಥೆಯ ನಿರ್ದೇಶಕ ಟಿ. ದಾಮೋದರನ್‌ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ರೈತರು ಮೇ ತಿಂಗಳ ಅವಧಿಯಲ್ಲಿ ಮಾವಿನ ಗಿಡಗಳಿಗೆ ನೀರುಣಿಸುವ ಮೂಲಕ ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ನೆಲಕ್ಕೆ ಬೀಳದಂತೆ ತಡೆಯಲು ಮುಂಜಾಗ್ರತಾ ಕ್ರಮಕೈಗೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

‘ಸದ್ಯ ಮಾವು ಹೂ ಬಿಡುವ ಪ್ರಕ್ರಿಯೆ ಮುಗಿದಿದೆ. ಪರಾಗಸ್ಪರ್ಶ ಹಂತವೂ ಮುಕ್ತಾಯವಾಗಿದ್ದು, ಕಾಯಿಯಾಗುವ ಹಂತ ಶುರುವಾಗಿದೆ. ಸಾಮಾನ್ಯ ಬಿಸಿ ಗಾಳಿಯು ಇಳುವರಿ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ಅದು ಪರೋಕ್ಷವಾಗಿ ಇಳುವರಿ ಹೆಚ್ಚಳಕ್ಕೆ ನೆರವಾಗಲಿದೆ’ ಎಂದು ಹೇಳಿದ್ದಾರೆ. 

ದಕ್ಷಿಣ ಭಾರತದ ರಾಜ್ಯಗಳಲ್ಲಿ ದೇಶದಲ್ಲಿನ ಅರ್ಧದಷ್ಟು ಮಾವಿನ ಉತ್ಪಾದನೆಯಾಗುತ್ತದೆ. ಈ ಬಾರಿಯೂ ಉತ್ಪಾದನೆ ಹೆಚ್ಚಿರಲಿದೆ. ಆದರೆ, ಕಳೆದ ವರ್ಷ ಹವಾಮಾನ ವೈಪರೀತ್ಯದಿಂದ ಶೇ 15ರಷ್ಟು ಉತ್ಪಾದನೆ ಕುಸಿದಿತ್ತು. ಈ ವರ್ಷ ಪರಿಸ್ಥಿತಿ ಸುಧಾರಿಸಲಿದೆ ಎಂದು ವಿವರಿಸಿದ್ದಾರೆ.

ಸಾಮಾನ್ಯ ಬಿಸಿ ಗಾಳಿ ಬೀಸುವ ವೇಳೆಯೂ ರೈತರು ಮಾವಿನ ಗಿಡಗಳ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ಮಣ್ಣಿನ ತೇವಾಂಶವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಮಾವು ‘ಹಣ್ಣುಗಳ ರಾಜ’ನೆಂದು ಪ್ರಸಿದ್ಧಿ ಪಡೆದಿದೆ. ಮಾವು ಬೆಳೆಯುವ ದೇಶಗಳ ಪೈಕಿ ಭಾರತವೂ ಒಂದಾಗಿದೆ. ವಿಶ್ವದ ಉತ್ಪಾದನೆಯಲ್ಲಿ ದೇಶದ ಪಾಲು ಶೇ 42ರಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.