ADVERTISEMENT

ಟೊಮೆಟೊ ದರ ಹಿಂದಿಕ್ಕಿದ ನುಗ್ಗೇಕಾಯಿ!

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 20:05 IST
Last Updated 10 ಜನವರಿ 2019, 20:05 IST
   

ಬೆಂಗಳೂರು: ಮಾರುಕಟ್ಟೆಯಲ್ಲಿಕಳೆದ ಕೆಲವೇ ದಿನಗಳಲ್ಲಿ ತರಕಾರಿಗಳ ಬೆಲೆ ಗಮನಾರ್ಹ ಏರಿಕೆ ಕಂಡಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಸಿದ್ಧವಾಗಿವೆ.

ಚಳಿಯ ಪರಿಣಾಮದಿಂದಾಗಿ ತರಕಾರಿ ದರ ದಿಢೀರ್‌ ಏರಿಕೆಯಾಗಿದ್ದು, ಕೆ.ಆರ್‌.ಮಾರುಕಟ್ಟೆಯಲ್ಲಿ ಗುರುವಾರ ನುಗ್ಗೇಕಾಯಿ ಕೆ.ಜಿಗೆ ₹200ರಂತೆ ಮಾರಾಟವಾಗುತ್ತಿತ್ತು.

‘ಚಳಿಗಾಲವಾಗಿದ್ದರಿಂದ ನುಗ್ಗೇಗಿಡ ಸಾಕಷ್ಟು ಪ್ರಮಾಣದಲ್ಲಿ ಹೂಬಿಟ್ಟಿಲ್ಲ. ಪೂರೈಕೆ ಪ್ರಮಾಣವೂ ತೀರ ಕಡಿಮೆ ಇದೆ. ಹಾಗಾಗಿ, ₹100 ದರವಿದ್ದ ನುಗ್ಗೇಕಾಯಿ ಇದೀಗ ₹200 ತಲುಪಿದೆ’ ಎನ್ನುತ್ತಾರೆ ವ್ಯಾಪಾರಿ ಯಲ್ಲಮ್ಮ.

ADVERTISEMENT

ಟೊಮೆಟೊ ದರ ಎರಡೇ ದಿನಗಳಲ್ಲಿ ಕೆ.ಜಿ.ಗೆ ₹40ರಿಂದ ₹50 ತಲುಪಿದ್ದು, ವಾರದ ಹಿಂದೆ ₹30ಕ್ಕೆ ಮಾರಾಟವಾಗುತ್ತಿತ್ತು. ಸಂಕ್ರಾಂತಿ ವೇಳೆಗೆ ಇನ್ನೂ ಏರಿಕೆಯಾಗುವ ನಿರೀಕ್ಷೆ ಇದೆ.ಹಿರೇಕಾಯಿ, ಈರುಳ್ಳಿ, ಹುರುಳೀಕಾಯಿ, ಕೊತ್ತಂಬರಿ, ಬಟಾಣಿ ದರವೂ ಏರಿಕೆ ಕಂಡಿದೆ.

‘ಟೊಮೆಟೊ ಬೆಳೆಯುವ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬರಗಾಲದ ಪರಿಣಾಮದಿಂದಾಗಿ ಇಳುವರಿ ಕ್ಷೀಣಿಸಿದೆ. ಪೂರೈಕೆ ಪ್ರಮಾಣವೂ ಕಡಿಮೆಯಾಗಿದೆ. ಹಾಗಾಗಿ, ಮಾರುಕಟ್ಟೆಯಲ್ಲಿ ದರ ಏರಿಕೆ ಕಂಡಿದೆ’ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಕಳೆದ ಒಂದು ವಾರದಿಂದಲೂ ಚಳಿ ಹೆಚ್ಚಾಗಿದೆ. ಹೀಗಾಗಿ, ಟೊಮೆಟೊ ಬೇಗ ಹಣ್ಣಾಗುತ್ತಿಲ್ಲ. ಹಣ್ಣಾದರೂ ಕೆಂಪು ಬಣ್ಣಕ್ಕೆ ತಿರುಗುತ್ತಿಲ್ಲ. ಗುಣಮಟ್ಟದ ಹಣ್ಣು ಮಾರುಕಟ್ಟೆಗೆ ಬಾರದ ಪರಿಣಾಮ ದರ ಏರಿಕೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಟೊಮೆಟೊ ಕೆ.ಜಿ.ಗೆ ₹54ಕ್ಕೆ ಮಾರಾಟವಾಗುತ್ತಿದೆ.

ಸೊಪ್ಪಿನ ದರ ಏರಿಕೆ: ಕೊತ್ತಂಬರಿ ಸೊಪ್ಪು 15 ದಿನಗಳಿಂದಲೂ ಏರುತ್ತಾ ಬಂದಿದ್ದು, ಇದೀಗ ಒಂದು ಕಟ್ಟಿಗೆ ₹40 ರಿಂದ ₹50ಕ್ಕೆ ಮಾರಾಟವಾಗುತ್ತಿದೆ. ಕಳೆದ ವಾರ ₹ 30ರಿಂದ ₹ 35ಕ್ಕೆ ಮಾರಾಟವಾಗುತ್ತಿತ್ತು. ಇನ್ನುಳಿದಂತೆ ಮೆಂತೆ, ಸಬ್ಬಸಿಗೆ ಸೊಪ್ಪಿನ ದರದಲ್ಲೂ ಕೊಂಚ ಏರಿಕೆಯಾಗಿದೆ.

ಮೊಟ್ಟೆ ದರ ಕೂಡ ₹5.50 ರಿಂದ ₹6 ಕ್ಕೇರಿದೆ.

**

ಸಂಕ್ರಾಂತಿ ಅಂಗವಾಗಿ ತಮಿಳುನಾಡು ಮತ್ತಿತರ ಭಾಗಗಳಲ್ಲಿ ತರಕಾರಿಗಳಿಗೆ ಹೆಚ್ಚು ಬೇಡಿಕೆ ಇದೆ. ಹಬ್ಬ ಮುಗಿಯುವವರೆಗೂ ದರಗಳಲ್ಲಿ ಏರಿಳಿತ ಮುಂದುವರೆಯಲಿದೆ.

-ಪ್ರಿಯಕಮಲಾ, ತರಕಾರಿ ವ್ಯಾಪಾರಿ

ಭಾರತ್‌ ಬಂದ್‌ನಿಂದಾಗಿ ಮಾರುಕಟ್ಟೆಗೆ ತರಕಾರಿ, ಹೂಗಳ ಪೂರೈಕೆ ಕಡಿಮೆಯಾಗಿದೆ. ₹60 ಇದ್ದ ಕನಕಾಂಬರದ ದರ ₹100 ಕ್ಕೇರಿದೆ. ಸಂಕ್ರಾಂತಿ ವೇಳೆಗೆ ಹೂಗಳ ದರ ದುಪ್ಪಟ್ಟಾಗಲಿದೆ.

-ಯಲಂಗಿ, ಹೂವಿನ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.