ADVERTISEMENT

ಹೊಸ ವರ್ಷದಲ್ಲಿ ದಾಖಲೆ ಬರೆದ ಷೇರುಪೇಟೆ

ಪಿಟಿಐ
Published 1 ಜನವರಿ 2021, 16:21 IST
Last Updated 1 ಜನವರಿ 2021, 16:21 IST
ಷೇರುಪೇಟೆಯಲ್ಲಿ ಗೂಳಿ ಓಟ–ಪ್ರಾತಿನಿಧಿಕ ಚಿತ್ರ
ಷೇರುಪೇಟೆಯಲ್ಲಿ ಗೂಳಿ ಓಟ–ಪ್ರಾತಿನಿಧಿಕ ಚಿತ್ರ   

ಮುಂಬೈ: ಹೊಸ ವರ್ಷದ ಮೊದಲ ದಿನ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ದಾಖಲೆಯ ಮಟ್ಟವನ್ನು ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕವಾದ ನಿಫ್ಟಿ ಇದೇ ಮೊದಲ ಬಾರಿಗೆ 14 ಸಾವಿರಕ್ಕಿಂತ ಹೆಚ್ಚಿನ ಮಟ್ಟದಲ್ಲಿ ವಹಿವಾಟು ಕೊನೆಗೊಳಿಸಿತು. ಮಾಹಿತಿ ತಂತ್ರಜ್ಞಾನ (ಐ.ಟಿ.), ಆಟೊಮೊಬೈಲ್‌ ಮತ್ತು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ವಸ್ತು (ಎಫ್‌ಎಂಸಿಜಿ) ಕಂಪನಿಗಳ ಷೇರುಗಳ ಖರೀದಿ ಭರಾಟೆ ಜೋರಾಗಿತ್ತು.

ದಾಖಲೆ ಬರೆಯುವ ಹಾದಿಯಲ್ಲಿ ಮುಂದುವರಿದ ಸೆನ್ಸೆಕ್ಸ್‌, 117 ಅಂಶಗಳಷ್ಟು ಏರಿಕೆ ಕಂಡಿತು. ಸಾರ್ವಕಾಲಿಕ ದಾಖಲೆಯಾದ 47,868 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು. ಸೆನ್ಸೆಕ್ಸ್‌ ಸತತ ಎಂಟು ದಿನಗಳಿಂದ ಏರಿಕೆಯ ಹಾದಿಯಲ್ಲಿದೆ. ಡಿಸೆಂಬರ್‌ 22ರ ನಂತರ ಸೂಚ್ಯಂಕವು ಶೇಕಡ 5ರಷ್ಟು ಏರಿಕೆ ಕಂಡಿದೆ.

ನಿಫ್ಟಿಯು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 14,018 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ಸೆನ್ಸೆಕ್ಸ್‌ನಲ್ಲಿ ಐಟಿಸಿ, ಟಿಸಿಎಸ್‌, ಮಹೀಂದ್ರ ಆ್ಯಂಡ್ ಮಹೀಂದ್ರ, ಎಸ್‌ಬಿಐ ಮತ್ತು ಭಾರ್ತಿ ಏರ್‌ಟೆಲ್‌ ಗಳಿಕೆ ಕಂಡುಕೊಂಡ ಪ್ರಮುಖ ಕಂಪನಿಗಳು. ಷೇರುದಾರರಿಗೆ ಮೂರನೆಯ ಮಧ್ಯಂತರ ಡಿವಿಡೆಂಡ್ ಘೋಷಿಸುವ ಪ್ರಸ್ತಾವನೆಯನ್ನು ಜನವರಿ 8ರಂದು ಅನುಮೋದಿಸಲಾಗುವುದು ಎಂದು ಟಿಸಿಎಸ್‌ ಪ್ರಕಟಿಸಿದ ನಂತರ ಕಂಪನಿಯ ಷೇರುಗಳು ಶೇ 2.02ರಷ್ಟು ಏರಿಕೆ ಕಂಡವು.

ADVERTISEMENT

ಮಾರುತಿ ಸುಜುಕಿ, ಬಜಾಜ್ ಆಟೊ ಷೇರುಗಳು ಕೂಡ ಏರುಗತಿಯಲ್ಲಿ ಸಾಗಿದವು. ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಷೇರುಗಳು ಲಾಭ ಗಳಿಕೆಯ ವಹಿವಾಟಿನ ಕಾರಣಕ್ಕೆ ಇಳಿಕೆ ಕಂಡವು. ‘ಜಿಎಸ್‌ಟಿ ಸಂಗ್ರಹದಲ್ಲಿ ದಾಖಲೆಯ ಹೆಚ್ಚಳ ಆಗಿರುವುದು ಮಾರುಕಟ್ಟೆಯಲ್ಲಿ ಉತ್ಸಾಹ ಮೂಡಿಸಿತು’ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಎಸ್. ರಂಗನಾಥನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.