ADVERTISEMENT

ನೌಕರರನ್ನು ಕೆಲಸದಿಂದ ತೆಗೆಯಲಿರುವ ಮೆಟಾ

ಬೆಳವಣಿಗೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಹೂಡಿಕೆಗೆ ಮೆಟಾ ಆದ್ಯತೆ

ಪಿಟಿಐ
Published 7 ನವೆಂಬರ್ 2022, 15:24 IST
Last Updated 7 ನವೆಂಬರ್ 2022, 15:24 IST
Bangkok, Thailand - October 29, 2021: Meta logo is shown on a device screen. Meta is the new corporate name of Facebook. Social media platform will change to Meta to emphasize its metaverse vision.Meta logo is shown on a device screen
Bangkok, Thailand - October 29, 2021: Meta logo is shown on a device screen. Meta is the new corporate name of Facebook. Social media platform will change to Meta to emphasize its metaverse vision.Meta logo is shown on a device screen   

ನ್ಯೂಯಾರ್ಕ್: ಫೇಸ್‌ಬುಕ್‌ನ ಮಾತೃಸಂಸ್ಥೆಯಾಗಿರುವ ಮೆಟಾ ದೊಡ್ಡ ಪ್ರಮಾಣದಲ್ಲಿ ನೌಕರರನ್ನು ಕೆಲಸದಿಂದ ತೆಗೆಯಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

ಅಲ್ಲದೆ, ಇದು ತಂತ್ರಜ್ಞಾನ ವಲಯದ ಪ್ರಮುಖ ಕಂಪನಿಯೊಂದರಲ್ಲಿ ಒಂದು ವರ್ಷದ ಅವಧಿಯಲ್ಲಿ ನಡೆಯುವ ಅತಿದೊಡ್ಡ ನೌಕರಿ ಕಡಿತ ಆಗಬಹುದು ಎಂದು ಕೂಡ ವರದಿ ಹೇಳಿದೆ.

ಮೆಟಾ ಕಂಪನಿಯಲ್ಲಿ 87 ಸಾವಿರಕ್ಕೂ ಹೆಚ್ಚು ನೌಕರರು ಇದ್ದಾರೆ. ಸಹಸ್ರಾರು ಮಂದಿಯನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಇದೆ. ಕೆಲಸದಿಂದ ತೆಗೆಯುವ ಪ್ರಕ್ರಿಯೆಯು ಬುಧವಾರದಿಂದಲೇ ಆರಂಭವಾಗಬಹುದು ಎಂದು ದಿ ವಾಲ್‌ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ADVERTISEMENT

ನೌಕರರು ಅಗತ್ಯವಲ್ಲದ ಪ್ರವಾಸಗಳನ್ನು ರದ್ದು ಮಾಡಬೇಕು ಎಂದು ಕಂಪನಿಯ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಈ ವರದಿಯು ತಿಳಿಸಿದೆ.

ಹೆಚ್ಚಿನ ಆದ್ಯತೆಯ ಬೆಳವಣಿಗೆಯ ಕ್ಷೇತ್ರಗಳಲ್ಲಿ ಹೂಡಿಕೆಗೆ ಕಂಪನಿಯು ಗಮನ ನೀಡಲಿದೆ ಎಂದು ಮೆಟಾ ಸಿಇಒ ಮಾರ್ಕ್‌ ಝಕರ್‌ಬರ್ಗ್‌ ಹೇಳಿದ್ದಾರೆ. ‘ಅಂದರೆ ಕೆಲವು ತಂಡಗಳು ಅರ್ಥಪೂರ್ಣ ಬೆಳವಣಿಗೆ ಕಾಣುತ್ತವೆ. ಇತರ ಹಲವು ತಂಡಗಳು ಬೆಳವಣಿಗೆ ಕಾಣುವುದಿಲ್ಲ ಹಾಗೂ ಮುಂದಿನ ವರ್ಷದಲ್ಲಿ ಅವು ಸಣ್ಣದಾಗಬಹುದು’ ಎಂದು ಅವರು ಹಿಂದಿನ ತಿಂಗಳು ಹೇಳಿದ್ದರು.

‘ವಾಸ್ತವದಲ್ಲಿ, ಕಂಪನಿಯಲ್ಲಿ ಇರಬಾರದ ಒಂದಿಷ್ಟು ಜನ ಇದ್ದಾರೆ’ ಎಂದು ಕೂಡ ಅವರು ಹೇಳಿದ್ದರು. ಟ್ವಿಟರ್‌ ಕಂಪನಿಯಲ್ಲಿ ನೌಕರರನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ಶುರುವಾದ ಬೆನ್ನಲ್ಲೇ ಮೆಟಾದಲ್ಲಿಯೂ ಈ ಪ್ರಕ್ರಿಯೆ ಆರಂಭವಾಗಿದೆ. ಮೆಟಾ ಕಂಪನಿಯ ಷೇರು ಮೌಲ್ಯವು ಈ ವರ್ಷದಲ್ಲಿ ಶೇಕಡ 70ರಷ್ಟು ಕುಸಿತ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.