ADVERTISEMENT

ಮ್ಯೂಚುವಲ್‌ ಫಂಡ್‌ಗೆ ಮುದ್ರಾಂಕ ಶುಲ್ಕಹೂಡಿಕೆದಾರರ ಮೇಲೆ ಪರಿಣಾಮ ಬೀರದು

ಉದ್ಯಮ ಪರಿಣತರ ಅಭಿಪ್ರಾಯ

ಪಿಟಿಐ
Published 1 ಜುಲೈ 2020, 16:01 IST
Last Updated 1 ಜುಲೈ 2020, 16:01 IST
–
   

ನವದೆಹಲಿ: ಮ್ಯೂಚುವಲ್‌ ಫಂಡ್‌ಗಳ ಖರೀದಿಗೆ ಬುಧವಾರದಿಂದ ಜಾರಿಗೆ ಬಂದಿರುವ ಮುದ್ರಾಂಕ ಶುಲ್ಕದಿಂದ ಸಾಮಾನ್ಯ ಹೂಡಿಕೆದಾರರ ಮೇಲೆ ಅತ್ಯಲ್ಪ ಅಥವಾ ಯಾವುದೇ ಪರಿಣಾಮ ಕಂಡು ಬರುವುದಿಲ್ಲ ಎಂದು ಮಾರುಕಟ್ಟೆ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಶೇ 0.005ರಷ್ಟು ಶುಲ್ಕವು ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ), ವ್ಯವಸ್ಥಿತ ವರ್ಗಾವಣೆ ಯೋಜನೆ(ಎಸ್‌ಟಿಪಿ), ಲಾಭಾಂಶ ಮರು ಹೂಡಿಕೆ ಮತ್ತು ಒಂದೇ ಕಂಪನಿಯ ಒಂದು ಯೋಜನೆಯಿಂದ ಇನ್ನೊಂದು ಯೋಜನೆಗೆ ಹೂಡಿಕೆ ಬದಲಿಸುವ ವಹಿವಾಟಿಗೆ ಅನ್ವಯವಾಗಲಿದೆ. ಯುನಿಟ್ಸ್‌ಗಳನ್ನು ಮರಳಿಸಿ ಹಣ ಮರಳಿ ಪಡೆಯುವುದಕ್ಕೆ ಅನ್ವಯಗೊಳ್ಳುವುದಿಲ್ಲ.

ಒಂದು ಡಿಮ್ಯಾಟ್‌ ಖಾತೆಯಿಂದ ಇನ್ನೊಂದು ಡಿಮ್ಯಾಟ್‌ ಖಾತೆಗೆ ವರ್ಗಾವಣೆ ಮಾಡಲು ಶೇ 0.015ರಷ್ಟು ಶುಲ್ಕ ಅನ್ವಯಿಸಲಿದೆ. ಯುನಿಟ್‌ಗಳನ್ನು ಮರಳಿಸಿ ಹಣ ಪಡೆಯುವ ಅಥವಾ ಮಾರಾಟಕ್ಕೆ ಈ ಶುಲ್ಕ ಅನ್ವಯಗೊಳ್ಳುವುದಿಲ್ಲ.

ADVERTISEMENT

‘ಮುದ್ರಾಂಕ ಶುಲ್ಕವು ಅತ್ಯಲ್ಪ ‍ಪ್ರಮಾಣದಲ್ಲಿ ಇರುವುದರಿಂದ ಮ್ಯೂಚುವಲ್‌ ಫಂಡ್ ಹೂಡಿಕೆದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಆಶಿಕಾ ವೆಲ್ತ್‌ ಅಡ್ವೈಸರ್‌ನ ಸಿಇಒ ಅಮಿತ್‌ ಜೈನ್‌ ಹೇಳಿದ್ದಾರೆ.

‘ಸಾಮಾನ್ಯ ಹೂಡಿಕೆದಾರರು 3 ತಿಂಗಳಿಗಿಂತ ಕಡಿಮೆ ಅವಧಿಗೆ ಹಲವು ಕೋಟಿ ರೂಪಾಯಿಗಳನ್ನು ಮ್ಯೂಚುವಲ್‌ ಫಂಡ್‌ಗಳ ಖರೀದಿಗೆ ವೆಚ್ಚ ಮಾಡಿದರೆ ಕೆಲ ಮಟ್ಟಿಗೆ ಸ್ಟ್ಯಾಂಪ್‌ ಡ್ಯೂಟಿ ಪಾವತಿಸಬೇಕಾಗುತ್ತದೆ. ಕಾರ್ಪೊರೇಟ್‌ ಹೂಡಿಕೆದಾರರು ಕೆಲವೇ ದಿನಗಳಿಗಾಗಿ ಹಲವು ಕೋಟಿಗಳನ್ನು ಹೂಡಿಕೆ ಮಾಡುವುದರಿಂದ ಅವರಿಗೂ ಶುಲ್ಕದ ಬಿಸಿ ಕೆಲಮಟ್ಟಿಗೆ ತಟ್ಟಲಿದೆ’ ಎಂದು ಪ್ರೈಮ್‌ಇನ್ವೆಸ್ಟರ್‌ ಸಹ ಸ್ಥಾಪಕಿ ವಿದ್ಯಾ ಬಾಲಾ ಹೇಳಿದ್ದಾರೆ.

’ಪ್ರತಿ ₹ 1 ಲಕ್ಷ ಹೂಡಿಕೆಗೆ ಮುದ್ರಾಂಕ ಶುಲ್ಕವು ₹ 5 ಇರಲಿದೆ. ಹೀಗಾಗಿ ₹ 1 ಲಕ್ಷ ಹೂಡಿಕೆ ಮಾಡಿದರೆ ₹ 99,995 ಮೊತ್ತಕ್ಕೆ ಯುನಿಟ್‌ಗಳನ್ನು ಹಂಚಿಕೆಯಾಗಲಿದೆ’ ಎಂದು ಬಾಲಾ ವಿವರಿಸಿದ್ದಾರೆ.

’ದೀರ್ಘಾವಧಿ ಹೂಡಿಕೆದಾರರ ಮೇಲೆ ಕನಿಷ್ಠ ಪರಿಣಾಮ ಕಂಡು ಬರಲಿದೆ’ ಎಂದು ಸ್ಯಾಮ್ಕೊ ಸೆಕ್ಯುರಿಟೀಸ್‌ನಲ್ಲಿ ರ್‍ಯಾಂಕ್‌ಎಂಎಫ್‌ ಮುಖ್ಯಸ್ಥರಾಗಿರುವ ಓಂಕೇಶ್ವರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

‘ಒಂದು ಬಾರಿಗೆ ಮಾತ್ರ ವಿಧಿಸಲಾಗುವ ಸ್ಟ್ಯಾಂಪ್‌ ಡ್ಯೂಟಿಯು ಅಲ್ಪಾವಧಿ ಹೂಡಿಕೆದಾರರಿಗೆ ಮಾತ್ರ ಅನುಭವಕ್ಕೆ ಬರಲಿದೆ’ ಎಂದು ಸ್ಕ್ರಿಪ್‌ಬಾಕ್ಸ್‌ ಸಹ ಸ್ಥಾಪಕ ಪ್ರತೀಕ್‌ ಮೆಹ್ತಾ ಅವರೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.