ನವದೆಹಲಿ: 2024–25ನೇ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 6.2ರಷ್ಟು ಪ್ರಗತಿ ಕಂಡಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಶೇ 9.5ರಷ್ಟು ದಾಖಲಾಗಿತ್ತು. ಇದಕ್ಕೆ ಹೋಲಿಸಿದರೆ ಶೇ 3.3ರಷ್ಟು ಇಳಿಕೆಯಾಗಿದೆ. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಂದಾಜಿಸಿದ್ದ ಶೇ 6.8ಕ್ಕಿಂತಲೂ ಕಡಿಮೆಯಾಗಿದೆ.
ಕೃಷಿ ವಲಯ ಹೊರತುಪಡಿಸಿ ಗಣಿಗಾರಿಕೆ, ತಯಾರಿಕೆ ಸೇರಿ ಇತರೆ ವಲಯಗಳಲ್ಲಿ ಬೆಳವಣಿಗೆ ಕುಸಿತವೇ ಇದಕ್ಕೆ ಕಾರಣ ಎಂದು ಶುಕ್ರವಾರ ಬಿಡುಗಡೆಯಾಗಿರುವ ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ವರದಿ ತಿಳಿಸಿದೆ.
ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿಯು ಎರಡು ವರ್ಷಗಳ ಕನಿಷ್ಠ ಮಟ್ಟವಾದ ಶೇ 5.6ರಷ್ಟು ದಾಖಲಾಗಿತ್ತು. ಇದಕ್ಕೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಅಲ್ಪಮಟ್ಟಿಗೆ ಚೇತರಿಕೆ ಕಂಡಿದೆ. ಸರ್ಕಾರದ ವೆಚ್ಚದ ಪ್ರಮಾಣದಲ್ಲಿ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸರಕು ಮತ್ತು ಸೇವೆಗೆ ಬೇಡಿಕೆ ಹೆಚ್ಚಳವಾಗಿದೆ. ಸೇವಾ ವಲಯದ ರಫ್ತು ಸದೃಢವಾಗಿರುವುದು ಇದಕ್ಕೆ ಕಾರಣ ಎಂದು ತಿಳಿಸಿದೆ.
2024–25ನೇ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೇ 6.4ರಷ್ಟು ಪ್ರಗತಿ ಕಾಣಲಿದೆ ಎಂದು ಸಾಂಖ್ಯಿಕ ಕಚೇರಿಯು ಜನವರಿಯಲ್ಲಿ ಪ್ರಕಟಿಸಿದ್ದ ಮೊದಲ ಅಂದಾಜು ವರದಿಯಲ್ಲಿ ಹೇಳಿತ್ತು. ಸದ್ಯ ಇದನ್ನು ಶೇ 6.5ಕ್ಕೆ ಪರಿಷ್ಕರಿಸಲಾಗಿದೆ. ಇದು ನಾಲ್ಕು ವರ್ಷಗಳಲ್ಲಿನ ಅತ್ಯಂತ ನಿಧಾನಗತಿಯ ಬೆಳವಣಿಗೆ ದರವಾಗಿದೆ.
ನಾಲ್ಕು ವರ್ಷದ ನಿಧಾನಗತಿ: 2024–25ನೇ ಆರ್ಥಿಕ ವರ್ಷದಲ್ಲಿ ಜಿಡಿಪಿಯು ಶೇ 6.4ರಷ್ಟು ಪ್ರಗತಿ ಕಾಣಲಿದೆ ಎಂದು ಸಾಂಖ್ಯಿಕ ಕಚೇರಿಯು ಜನವರಿಯಲ್ಲಿ ಪ್ರಕಟಿಸಿದ್ದ ಮೊದಲ ಅಂದಾಜು ವರದಿಯಲ್ಲಿ ಹೇಳಿತ್ತು. ಸದ್ಯ ಇದನ್ನು ಶೇ 6.5ಕ್ಕೆ ಪರಿಷ್ಕರಿಸಲಾಗಿದೆ. ಇದು ನಾಲ್ಕು ವರ್ಷಗಳಲ್ಲಿನ ಅತ್ಯಂತ ನಿಧಾನಗತಿಯ ಬೆಳವಣಿಗೆ ದರವಾಗಿದೆ.
ತಯಾರಿಕೆ, ಗಣಿಗಾರಿಕೆ ಇಳಿಕೆ: ಕಳೆದ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ತಯಾರಿಕಾ ವಲಯವು ಶೇ 14ರಷ್ಟು ಪ್ರಗತಿ ಕಂಡಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದೇ ಅವಧಿಯಲ್ಲಿ ಶೇ 3.5ಕ್ಕೆ ಕುಗ್ಗಿದೆ. ಗಣಿಗಾರಿಕೆ ಮತ್ತು ಕ್ವಾರಿ ವಲಯವು ಶೇ 4.7ರಿಂದ ಶೇ 1.4ಕ್ಕೆ ಕುಸಿದಿದೆ.
ನಿರ್ಮಾಣ ವಲಯದ ಬೆಳವಣಿಗೆಯು ಶೇ 10ರಿಂದ ಶೇ 7ಕ್ಕೆ ತಗ್ಗಿದೆ. ವಿದ್ಯುತ್, ಅನಿಲ, ನೀರು ಪೂರೈಕೆ ವಲಯವು ಶೇ 10.1ರಿಂದ ಶೇ 5.1ಕ್ಕೆ ಇಳಿದಿದೆ.
ವ್ಯಾಪಾರ, ಹೋಟೆಲ್, ಸಾರಿಗೆ, ಸಂವಹನ ಮತ್ತು ಪ್ರಸಾರ ವಲಯದ ಬೆಳವಣಿಗೆಯು ಶೇ 8ರಿಂದ ಶೇ 6.7ಕ್ಕೆ ಕಡಿಮೆಯಾಗಿದೆ. ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವಾ ವಲಯವು ಶೇ 8.4ರಿಂದ ಶೇ 7.2ಕ್ಕೆ ಇಳಿದಿದೆ.
ಸಾರ್ವಜನಿಕ ಆಡಳಿತ, ರಕ್ಷಣೆ ಸೇರಿ ಇತರೆ ಸೇವಾ ವಲಯವು ಶೇ 8.4ರಿಂದ ಶೇ 8.8ಕ್ಕೆ ಏರಿಕೆಯಾಗಿದೆ.
ಮುಂದಿನ ಆರ್ಥಿಕ ವರ್ಷವನ್ನು ಅದರ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಲು ಮಾರುಕಟ್ಟೆ ಬೆಲೆಗಳಲ್ಲಿ ಜಿಡಿಪಿಯನ್ನು ಲೆಕ್ಕ ಹಾಕುವುದಕ್ಕೆ ಸಾಂಕೇತಿಕ (ನಾಮಿನಲ್) ಜಿಡಿಪಿ ಎಂದು ಕರೆಯಲಾಗುತ್ತದೆ.
2023–24ರಲ್ಲಿ ಸಾಂಕೇತಿಕ ಜಿಡಿಪಿ ಗಾತ್ರ ₹301.23 ಲಕ್ಷ ಕೋಟಿ (ಶೇ 9.9ರಷ್ಟು) ಇತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದರ ಗಾತ್ರ ₹331.03 ಲಕ್ಷ ಕೋಟಿ ಆಗಿದೆ.
ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರ ಶೇ 6.1ರಷ್ಟು ದಾಖಲಾಗಿದೆ. ಇದರ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 9.5ರಷ್ಟು ದಾಖಲಾಗಿತ್ತು.
ಕೃಷಿ ವಲಯ ಸುಧಾರಣೆ
ಇತರೆ ವಲಯಗಳಿಗೆ ಹೋಲಿಸಿದರೆ ಕೃಷಿ ವಲಯದ ಬೆಳವಣಿಗೆಯು ಸುಧಾರಣೆ ಕಂಡಿದೆ. ಕಳೆದ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 1.5ರಷ್ಟಿದ್ದ ಈ ವಲಯದ ಪ್ರಗತಿಯು ಶೇ 5.6ಕ್ಕೆ ಏರಿಕೆಯಾಗಿದೆ. ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗಿತ್ತು. ಹಿಂಗಾರು ಅವಧಿಯಲ್ಲೂ ಬಿತ್ತನೆ ಪ್ರದೇಶದ ವಿಸ್ತೀರ್ಣ ಹೆಚ್ಚಿತ್ತು. ಇದರಿಂದ ಈ ವಲಯದ ಪ್ರಗತಿಯು ಸುಧಾರಣೆಯಾಗಿದೆ.
ಇಳಿಕೆಗೆ ಕಾರಣ ಏನು?
*ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕುಸಿತ ಕಂಡಿದ್ದ ತಯಾರಿಕಾ ಮತ್ತು ಗಣಿಗಾರಿಕೆ ವಲಯದ ಪ್ರಗತಿಯು ಡಿಸೆಂಬರ್ ತ್ರೈಮಾಸಿಕದಲ್ಲೂ ಸುಧಾರಣೆ ಕಂಡಿಲ್ಲ
* ಉದ್ಯೋಗ ಸೃಷ್ಟಿಯಲ್ಲಿ ನಿರ್ಮಾಣ ವಲಯದ ಪಾತ್ರ ಕೂಡ ಹಿರಿದು. ಈ ವಲಯದ ಬೆಳವಣಿಗೆಯು ಕುಂಠಿತಗೊಂಡಿದೆ
* ಆರ್ಥಿಕತೆ ಬೆಳವಣಿಗೆಗೆ ಕೊಡುಗೆ ನೀಡುವ ವ್ಯಾಪಾರ, ಹೋಟೆಲ್, ಸಾರಿಗೆ, ಸಂವಹನ ಮತ್ತು ಪ್ರಸಾರ ವಲಯದ ಪ್ರಗತಿ ತಗ್ಗಿದೆ
* ಸರಕು ಮತ್ತು ಸೇವೆಗೆ ಸಂಬಂಧಿಸಿದಂತೆ ನಗರ ಪ್ರದೇಶದಲ್ಲಿ ಬೇಡಿಕೆ ಕಡಿಮೆಯಾಗಿದೆ. ಹಬ್ಬ ಮತ್ತು ಮದುವೆ ಋತುವಿನ ಹೊರತಾಗಿಯೂ ಹದಕ್ಕೆ ಮರಳಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.