ADVERTISEMENT

ಮ್ಯೂಚುವಲ್ ಫಂಡ್‌: ಹೊಸದಾಗಿ 81 ಲಕ್ಷ ಖಾತೆ ಸೇರ್ಪಡೆ

ಪಿಟಿಐ
Published 25 ಏಪ್ರಿಲ್ 2021, 14:48 IST
Last Updated 25 ಏಪ್ರಿಲ್ 2021, 14:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮ್ಯೂಚುವಲ್‌ ಫಂಡ್‌ ಉದ್ಯಮಕ್ಕೆ 2020–21ರಲ್ಲಿ ಹೊಸದಾಗಿ 81 ಲಕ್ಷ ಹೂಡಿಕೆದಾರರ ಖಾತೆಗಳು ಸೇರ್ಪಡೆ ಆಗಿವೆ. ಇದರಿಂದ ಒಟ್ಟು ಖಾತೆಗಳ ಸಂಖ್ಯೆ 9.78 ಕೋಟಿಗೆ ಏರಿಕೆಯಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿಯೂ ಆರೋಗ್ಯಕರ ಬೆಳವಣಿಗೆಯು ಮುಂದುವರಿಯಲಿದೆ ಎನ್ನುವುದು ತಜ್ಞರ ಭರವಸೆ ಆಗಿದೆ.

2019–20ರಲ್ಲಿ ಉದ್ಯಮಕ್ಕೆ 72.89 ಲಕ್ಷ ಖಾತೆಗಳು ಹೊಸದಾಗಿ ಸೇರ್ಪಡೆ ಆಗಿದ್ದವು ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟವು ಮಾಹಿತಿ ನೀಡಿದೆ.

ADVERTISEMENT

‘ದೀರ್ಘಾವಧಿಯ ಮತ್ತು ಅಲ್ಪಾವಧಿಯ ಹಣಕಾಸಿನ ಗುರಿಗಳನ್ನು ಈಡೇರಿಸಿಕೊಳ್ಳಲು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರ ಮಹತ್ವವನ್ನು ಹೂಡಿಕೆದಾರರು ಹೆಚ್ಚು ಅರ್ಥ ಮಾಡಿಕೊಳ್ಳುತ್ತಿದ್ದಾರೆ’ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಸಂಶೋಧನಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಕೌಸ್ತುಭ್‌ ಬೇಲ್ಪುರ್‌ಕರ್‌ ತಿಳಿಸಿದ್ದಾರೆ.

‘ಹೂಡಿಕೆದಾರರ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಜಾಗೃತಿಯು ಕಳೆದ ಹಲವು ವರ್ಷಗಳಿಂದ ಹೆಚ್ಚುತ್ತಿದೆ. ಉದ್ಯಮದ ಬೆಳವಣಿಗೆಗೆ ದೊಡ್ಡ ನಗರಗಳಷ್ಟೇ ಅಲ್ಲದೆ, ಸಣ್ಣ ನಗರಗಳ (ಬಿ–30) ಕೊಡುಗೆಯೂ ಹೆಚ್ಚಾಗುತ್ತಿದೆ’ ಎಂದೂ ಹೇಳಿದ್ದಾರೆ.

‘ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿವೆ. ಹೀಗಾಗಿಮ್ಯೂಚುವಲ್ ಫಂಡ್ ಉದ್ಯಮವು ಈ ವರ್ಷವೂ ಉತ್ತಮ ಬೆಳವಣಿಗೆ ಕಾಣಬೇಕಿದೆ’ ಎಂದು ಮೈವೆಲ್ತ್‌ಗ್ರೋತ್.ಕಾಂನ ಸಹ ಸ್ಥಾಪಕ ಹರ್ಷದ್‌ ಚೇತನ್ವಾಲಾ ತಿಳಿಸಿದ್ದಾರೆ.

‘ಸಣ್ಣ ಹೂಡಿಕೆದಾರರ ತಿಳಿವಳಿಕೆ ಮತ್ತು ಪಾಲ್ಗೊಳ್ಳುವಿಕೆಯ ಲಾಭವನ್ನು ಉದ್ಯಮವು ಪಡೆಯುತ್ತಿದೆ. ಮ್ಯೂಚುವಲ್ ಫಂಡ್‌ಗಳ ಮೂಲಕ ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸಬಹುದು ಎನ್ನುವುದನ್ನು ಹೆಚ್ಚು ಹೆಚ್ಚು ಜನ ಅರ್ಥ ಮಾಡಿಕೊಂಡಂತೆಲ್ಲ ಈ ವ್ಯವಹಾರವು ಬೆಳೆಯುತ್ತಲೇ ಹೋಗುತ್ತದೆ’ ಎಂದು ಶೇರ್‌ಖಾನ್‌ನ ಹೂಡಿಕೆ ಪರಿಹಾರಗಳ ಮುಖ್ಯಸ್ಥ ಗೌತಮ್‌ ಕಲಿಯಾ ಹೇಳಿದ್ದಾರೆ.

‘ಆದರೆ, ಅಲ್ಪಾವಧಿಯಲ್ಲಿ ನಿಯಂತ್ರಣ ವ್ಯವಸ್ಥೆಯಲ್ಲಿನ ಬದಲಾವಣೆಗಳು, ಮಾರುಕಟ್ಟೆಯಲ್ಲಿನ ಕುಸಿತ, ಸಾಂಕ್ರಾಮಿಕದ ಉಲ್ಬಣ... ಇತ್ಯಾದಿ ಅಂಶಗಳು ಬೆಳವಣಿಗೆಗೆ ಅಡ್ಡಿಯಾಗುವ ಸಾಧ್ಯತೆಗಳು ಖಂಡಿತವಾಗಿಯೂ ಇವೆ’ ಎನ್ನುವುದನ್ನೂ ಅವರು ತಿಳಿಸಿದ್ದಾರೆ.

ಈಕ್ವಿಟಿ ಆಧಾರಿತ ಯೋಜನೆಗಳಲ್ಲಿ ಹೂಡಿಕೆದಾರ ಖಾತೆಗಳ ಸಂಖ್ಯೆಯು 2019–20ರಲ್ಲಿ 6.44 ಕೋಟಿ ಇದ್ದಿದ್ದು 2020–21ರಲ್ಲಿ 6.68 ಕೋಟಿಗೆ ಏರಿಕೆಯಾಗಿದೆ. ಅದೇ ರೀತಿ ಸಾಲ‍ಪತ್ರ ಆಧಾರಿತ ಯೋಜನೆಗಳ ಖಾತೆಗಳ ಸಂಖ್ಯೆ 16.16 ಲಕ್ಷದಿಂದ 88.4 ಲಕ್ಷಕ್ಕೆ ಏರಿಕೆ ಕಂಡಿದೆ.

ಮ್ಯೂಚುವಲ್ ಫಂಡ್ ಉದ್ಯಮದ ನಿರ್ವಹಣಾ ಸಂಪತ್ತು ₹ 22.26 ಲಕ್ಷ ಕೋಟಿಗಳಿಂದ ₹ 31.43 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.