ADVERTISEMENT

ಇ–ವಾಲೆಟ್‌:ಮೊಬೈಲ್‌ ರೀಚಾರ್ಜ್‌ಗೆ ಗರಿಷ್ಠ ಬಳಕೆ

ಪಿಟಿಐ
Published 8 ನವೆಂಬರ್ 2018, 20:16 IST
Last Updated 8 ನವೆಂಬರ್ 2018, 20:16 IST
   

ನವದೆಹಲಿ: ಗ್ರಾಹಕರು ಬಳಸುವ ಇ–ವಾಲೆಟ್‌ಗಳಲ್ಲಿನ ಬಹುತೇಕ ವಹಿವಾಟು ಮೊಬೈಲ್‌ ರೀಚಾರ್ಜ್‌ ಮತ್ತು ಗ್ರಾಹಕ ಸೇವೆಗಳ ಬಿಲ್‌ ಪಾವತಿಗೆ ಬಳಕೆಯಾಗುತ್ತಿರುವುದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ವೆಲೊಸಿಟಿ ಎಂಆರ್‌ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಬೆಂಗಳೂರು, ಪುಣೆ, ದೆಹಲಿ ಮತ್ತು ಕೋಲ್ಕತ್ತ ಮಹಾ ನಗರಗಳ 2,455 ಬಳಕೆದಾರರ ಸಮೀಕ್ಷೆಯಲ್ಲಿ ಈ ಸಂಗತಿ ಕಂಡು ಬಂದಿದೆ. ಪ್ರತಿ 10 ಇ–ವಾಲೆಟ್‌ ವಹಿವಾಟಿನಲ್ಲಿ 9 ವಹಿವಾಟುಗಳು ಮೊಬೈಲ್‌ ರೀಚಾರ್ಜ್‌ಗೆ ಮತ್ತು 10 ರಲ್ಲಿ 8 ಗ್ರಾಹಕ ಸೇವೆಗಳ ಬಿಲ್ ಪಾವತಿಗೆ ಸಂಬಂಧಿಸಿವೆ.

ನಗದುರಹಿತ ಪಾವತಿಗೆ ಗ್ರಾಹಕರು ಮೊಬೈಲ್‌ ವಾಲೆಟ್‌ಗಳಲ್ಲದೆ ಡೆಬಿಟ್‌ / ಕ್ರೆಡಿಟ್‌ ಕಾರ್ಡ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ ಬಳಸುತ್ತಿದ್ದಾರೆ. ಪ್ರತಿ ತಿಂಗಳ ಸಂಬಳ ₹ 1.5 ಲಕ್ಷದಿಂದ ₹ 2 ಲಕ್ಷದವರೆಗೆ ಇರುವವರಲ್ಲಿ ಕ್ರೆಡಿಟ್‌ ಕಾರ್ಡ್‌ಗಳ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ತಿಂಗಳ ವೇತನ ₹ 75 ಸಾವಿರದವರೆಗೆ ಇರುವವರು ಡೆಬಿಟ್‌ ಕಾರ್ಡ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ ಎಂದು ಅಧ್ಯಯನ ತಿಳಿಸಿದೆ.

ADVERTISEMENT

ಇ–ವಾಲೆಟ್‌ ಬಳಕೆಗೆ ಕ್ಯಾಷ್‌ಬ್ಯಾಕ್‌ ಉತ್ತೇಜನ, ಒಂದು ಕ್ಲಿಕ್‌ಗೆ ಸುಲಭವಾಗಿ ಹಣ ಪಾವತಿ, ಯಾವುದೇ ಹೊತ್ತಿನಲ್ಲಿ, ಎಲ್ಲಿಂದಲಾದರೂ ಹಣ ಪಾವತಿ ಸೌಲಭ್ಯದಿಂದಾಗಿ ವ್ಯಾಪಾರಿಗಳು ಮತ್ತು ಗ್ರಾಹಕರ ಪಾಲಿಗೆ ಹೆಚ್ಚಿನ ಪ್ರಯೋಜನ ದೊರೆಯುತ್ತಿದೆ. ಇತರ ಡಿಜಿಟಲ್‌ ಪಾವತಿ ವಿಧಾನಗಳಿಗೆ ಹೋಲಿಸಿದರೆ ಇದು ಅಗ್ಗದ ಸೇವೆಯೂ ಆಗಿದೆ.

‘ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಳ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ ಕೈಗೊಂಡ ಉತ್ತೇಜನಾ ಕ್ರಮಗಳಿಂದಾಗಿ ಆನ್‌ಲೈನ್‌ ಪಾವತಿಯು ಹೆಚ್ಚುತ್ತಿದೆ. ಇದರಿಂದ ದೇಶಿ ಆರ್ಥಿಕತೆಯು ಕಡಿಮೆ ನಗದು ಬಳಕೆಯತ್ತ ದಾಪುಗಾಲು ಹಾಕುತ್ತಿದೆ’ ಎಂದು ವೆಲೊಸಿಟಿ ಎಂಆರ್‌ನ ಸಿಇಒ ಜಸಲ್‌ ಶಾ ಹೇಳಿದ್ದಾರೆ. ಗರಿಷ್ಠ ಮುಖಬೆಲೆಯ ನೋಟು ರದ್ದತಿ ನಂತರ ಮೊಬೈಲ್‌ ವಾಲೆಟ್‌ಗಳ ಬಳಕೆಯು ಗಮನಾರ್ಹವಾಗಿ ಬಳಕೆಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.