ನವದೆಹಲಿ: ಮುಂಗಾರು ಬಿತ್ತನೆ ಹಂಗಾಮಿಗೆ ಸಂಬಂಧಿಸಿದಂತೆ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಳಕ್ಕೆ ಅನುಮೋದನೆ ನೀಡುವ ಮೂಲಕ ಕೇಂದ್ರ ಸಚಿವ ಸಂಪುಟ ಬುಧವಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ಎಂಎಸ್‌ಪಿ ಕುರಿತ ಕೃಷಿ ಸಚಿವಾಲಯದ ಪ್ರಸ್ತಾವವನ್ನು ಅನುಮೋದಿಸಲಾಗಿದೆ.
‘ದೇಶದ ವಿವಿಧ ಭಾಗಗಳಲ್ಲಿ ಮುಂಗಾರು ಬಹಳ ಬೇಗ ಪ್ರವೇಶಿಸಿದೆ. ದೇಶದ ಒಟ್ಟು ವಾರ್ಷಿಕ ಆಹಾರ ಧಾನ್ಯ ಉತ್ಪಾದನೆಗೆ ಶೇ 50ಕ್ಕಿಂತ ಹೆಚ್ಚು ಕೊಡುಗೆ ನೀಡುವ ಬೆಳೆಗಳ ಬಿತ್ತನೆಗೆ ಉತ್ತೇಜನ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗಾರರಿಗೆ ಇಲ್ಲಿ ತಿಳಿಸಿದರು.
‘ರೈತರು ತಮ್ಮ ಬೆಳೆಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಹುಚ್ಚೆಳ್ಳು (ಪ್ರತಿ ಕ್ವಿಂಟಲ್‌ಗೆ ₹820), ರಾಗಿ (ಪ್ರತಿ ಕ್ವಿಂಟಲ್‌ಗೆ ₹596), ಹತ್ತಿ (ಪ್ರತಿ ಕ್ವಿಂಟಲ್‌ಗೆ ₹589) ಮತ್ತು ಎಳ್ಳು (ಪ್ರತಿ ಕ್ವಿಂಟಲ್‌ಗೆ ₹579) ಅತ್ಯಧಿಕ ಬೆಂಬಲ ಬೆಲೆಯನ್ನು ಶಿಫಾರಸು ಮಾಡಲಾಗಿದೆ’ ಎಂದು ಅವರು ಹೇಳಿದರು.
ಭತ್ತಕ್ಕೆ ನೀಡುವ ಕನಿಷ್ಠ ಬೆಂಬಲ ಬೆಲೆಯು ಪ್ರತಿ ಕ್ವಿಂಟಲ್‌ಗೆ ಶೇ 3 (₹69), ದ್ವಿದಳ ಧಾನ್ಯಗಳು ಹಾಗೂ ಎಣ್ಣೆಬೀಜಗಳ ಎಂಎಸ್‌ಪಿ ಶೇ 9ರಷ್ಟು ಹೆಚ್ಚಳವಾಗಿದೆ. ದೇಶೀಯ ಉತ್ಪಾದನೆ ಹೆಚ್ಚಿಸಲು ಹಾಗೂ ಆಮದು ಅವಲಂಬನೆ ಕಡಿಮೆ ಮಾಡಲು ದೊಡ್ಡ ಪ್ರಮಾಣದಲ್ಲಿ ಬೆಂಬಲ ಬೆಲೆ ಜಾಸ್ತಿ ಮಾಡಲಾಗಿದೆ ಎಂದರು.
‘14 ಬೆಳೆಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯು ಉತ್ಪಾದನೆ ವೆಚ್ಚದ ಒಂದೂವರೆ ಪಟ್ಟು ಇರಲಿದೆ. 2018ರಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಈ ಕುರಿತ ಸ್ಪಷ್ಟ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿತ್ತು. ಆ ನೀತಿಗೆ ಅನುಗುಣವಾಗಿ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಕಳೆದ 10-11 ವರ್ಷಗಳಲ್ಲಿ, ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸಿಗೆ ಅನುಗುಣವಾಗಿ 14 ಬೆಳೆಗಳ ಎಂಎಸ್‌ಪಿಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.