ನವದೆಹಲಿ: ದೇಶದ ಮ್ಯೂಚುವಲ್ ಫಂಡ್‌ಗಳು ಜುಲೈ–ಆಗಸ್ಟ್ ಅವಧಿಯಲ್ಲಿ ಷೇರುಪೇಟೆಯಿಂದ ಒಟ್ಟು ₹ 17,600 ಕೋಟಿ ಹಿಂದಕ್ಕೆ ಪಡೆದಿವೆ. ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ನಕಾರಾತ್ಮಕ ವಹಿವಾಟು ನಡೆದಿರುವುದೇ ಇದಕ್ಕೆ ಕಾರಣ ಎಂದು ತಜ್ಞರು ಹೇಳಿದ್ದಾರೆ.
ಕೋವಿಡ್–19ಕ್ಕೆ ಸಂಬಂಧಿಸಿದ ಬಿಕ್ಕಟ್ಟು, ಜಾಗತಿಕ ಮಟ್ಟದಲ್ಲಿ ಮಂದಗತಿಯ ಆರ್ಥಿಕ ಚಟುವಟಿಕೆ ಹಾಗೂ ಷೇರುಪೇಟೆಯ ಚಂಚಲ ವಹಿವಾಟಿನಿಂದಾಗಿ ಈಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆಯುವಂತಾಗಿದೆ.
ಜನವರಿ–ಜೂನ್ ಅವಧಿಯಲ್ಲಿ ಮ್ಯೂಚುವಲ್ ಫಂಡ್ ಕಂಪನಿಗಳು ₹ 39,755 ಕೋಟಿ ಹೂಡಿಕೆ ಮಾಡಿದ್ದವು ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮಾಹಿತಿ ನೀಡಿದೆ.
ಜುಲೈ ಮತ್ತು ಆಗಸ್ಟ್‌ಅವಧಿಯಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಂದ ₹ 6,450 ಕೋಟಿ ಬಂಡವಾಳ ಹೊರಹೋಗಿದೆ.
‘ಕೋವಿಡ್–19 ಬಳಿಕ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಕಡಿಮೆಯಾಗುತ್ತಿದ್ದು, ಬಂಡವಾಳ ಹಿಂತೆಗೆತ ಪ್ರಮಾಣ ಹೆಚ್ಚಾಗುತ್ತಿದೆ. ವ್ಯವಸ್ಥಿತ ಹೂಡಿಕೆ ಯೋಜನೆಗಳಲ್ಲಿ (ಎಸ್‌ಐಪಿ) ತಿಂಗಳ ಹೂಡಿಕೆಯು ₹8 ಸಾವಿರಕ್ಕಿಂತಲೂ ಕಡಿಮೆ ಆಗಿದೆ. ಇನ್ನೊಂದೆಡೆ ಮ್ಯೂಚುವಲ್ ಫಂಡ್‌ಗಳು ಸಾಲಪತ್ರಗಳ ಮಾರುಕಟ್ಟೆಯ ಮೇಲೆ ₹ 83 ಸಾವಿರ ಕೋಟಿ ಹೂಡಿಕೆ ಮಾಡಿವೆ’ ಎಂದು ಬಜಾಜ್ ಕ್ಯಾಪಿಟಲ್‌ನ ಮುಖ್ಯ ಸಂಶೋಧನೆ ಮತ್ತು ಹೂಡಿಕೆ ಅಧಿಕಾರಿ ಅಲೋಕ್ ಅಗರ್‌ವಾಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.