ADVERTISEMENT

2024–25ನೇ ಸಾಲಿನ ರಾಜ್ಯದ ಆದ್ಯತಾ ಪತ್ರ ಬಿಡುಗಡೆ: ₹3.97 ಲಕ್ಷ ಸಾಲ ವಿತರಣೆ ಗುರಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
<div class="paragraphs"><p>ಬೆಂಗಳೂರಿನ ನಬಾರ್ಡ್‌ ಪ್ರಾದೇಶಿಕ ಕಚೇರಿಯಲ್ಲಿ ಮಂಗಳವಾರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು, ನಬಾರ್ಡ್‌ನಿಂದ ಸಿದ್ಧಪಡಿಸಿರುವ ಆದ್ಯತಾ ಪತ್ರವನ್ನು ಬಿಡುಗಡೆಗೊಳಿಸಿದರು.</p></div>

ಬೆಂಗಳೂರಿನ ನಬಾರ್ಡ್‌ ಪ್ರಾದೇಶಿಕ ಕಚೇರಿಯಲ್ಲಿ ಮಂಗಳವಾರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು, ನಬಾರ್ಡ್‌ನಿಂದ ಸಿದ್ಧಪಡಿಸಿರುವ ಆದ್ಯತಾ ಪತ್ರವನ್ನು ಬಿಡುಗಡೆಗೊಳಿಸಿದರು.

   

–ಪ್ರಜಾವಾಣಿ ಚಿತ್ರ

ಬೆಂಗಳೂರು: 2024–25ನೇ ಹಣಕಾಸು ವರ್ಷಕ್ಕೆ ರಾಜ್ಯದ ಆದ್ಯತಾ ವಲಯದ ಸಾಲದ ಪ್ರಮಾಣವನ್ನು ₹3.97 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ.

ADVERTISEMENT

ವಿವಿಧ ಬ್ಯಾಂಕ್‌ಗಳ ಮೂಲಕ ಈ ಸಾಲ ವಿತರಣೆಗೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ನಬಾರ್ಡ್) ನಿರ್ಧರಿಸಿದೆ. ಹಿಂದಿನ ಹಣಕಾಸು ವರ್ಷಗಳಿಗೆ ಹೋಲಿಸಿದರೆ ಸಾಲದ ಪ್ರಮಾಣವು ಶೇ 10.67ರಷ್ಟು ಏರಿಕೆಯಾಗಿದೆ. 2023–24ನೇ ಸಾಲಿನಡಿ ₹3.59 ಲಕ್ಷ ಕೋಟಿ ಸಾಲ ನಿಗದಿಪಡಿಸಲಾಗಿತ್ತು. 

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಿ ಆದ್ಯತಾ ವಲಯಗಳಿಗೆ ಅಗತ್ಯವಿರುವ ಆರ್ಥಿಕ ನೆರವಿನ ಕುರಿತು ನಬಾರ್ಡ್‌ ಸಿದ್ಧಪಡಿಸಿರುವ ಈ ಆದ್ಯತಾ ಪತ್ರವನ್ನು (ಸ್ಟೇಟ್‌ ಫೋಕಸ್ ಪೇಪರ್), ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌ ಅವರು ಮಂಗಳವಾರ ಬಿಡುಗಡೆಗೊಳಿಸಿದರು. 

ನಬಾರ್ಡ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಟಿ. ರಮೇಶ್‌ ಮಾತನಾಡಿ, ‘ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಡಿ ನೆರವು ಕಲ್ಪಿಸಿದೆ. 119 ನೀರಾವರಿ ಯೋಜನೆಗಳಿಗೆ ₹990 ಕೋಟಿ, ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ₹611 ಕೋಟಿ ನೆರವು ನೀಡಿದೆ’ ಎಂದು ವಿವರಿಸಿದರು.

ಸುಸ್ಥಿರ ನೀರಾವರಿ ಪದ್ಧತಿಗೆ ಉತ್ತೇಜನ ನೀಡುತ್ತಿದೆ. ಸೂಕ್ಷ್ಮ ನೀರಾವರಿ ನಿಧಿಯಡಿ ₹290 ಕೋಟಿ ನೀಡಿದೆ. ರೈತ ಉತ್ಪಾದಕರ ಸಂಸ್ಥೆಗಳಿಗೆ ಉತ್ತೇಜನ ನೀಡುತ್ತಿದೆ. ರಾಜ್ಯದ 5,491 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್‌) ಗಣಕೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಪಿ.ಎನ್‌. ರಘುನಾಥ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಖ್ಯ ಪ್ರಧಾನ ವ್ಯವಸ್ಥಾಪಕ ಕೃಷ್ಣನ್‌ ಶರ್ಮ, ಕೆನರಾ ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಹರ್ದೀಪ್‌ ಸಿಂಗ್‌ ಅಹ್ಲುವಾಲಿಯಾ ಹಾಜರಿದ್ದರು. 

ವಲಯವಾರು ಸಾಲದ ವಿವರ ₹1.85 ಲಕ್ಷ ಕೋಟಿ– ಕೃಷಿ ಮತ್ತು ಪೂರಕ ಚಟುವಟಿಕೆ ₹1.58 ಲಕ್ಷ ಕೋಟಿ– ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ₹54 ಸಾವಿರ ಕೋಟಿ– ಇತರೆ ಆದ್ಯತಾ ವಲಯ ₹3.59 ಲಕ್ಷ ಕೋಟಿ– 2023–24ರಲ್ಲಿ ನಿಗದಿಪಡಿಸಿದ್ದ ಸಾಲದ ಮೊತ್ತ

‘ಒಂದು ಟ್ರಿಲಿಯನ್‌ ಆರ್ಥಿಕತೆಗೆ ಸಿದ್ಧತೆ’

‘2030ರ ವೇಳೆಗೆ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯನ್ನು (ಜಿಎಸ್‌ಡಿಪಿ) ಒಂದು ಟ್ರಿಲಿಯನ್‌ ಡಾಲರ್‌ಗೆ ಏರಿಸಲು (ಸುಮಾರು ₹83 ಲಕ್ಷ ಕೋಟಿ) ಸರ್ಕಾರ ಗುರಿ ಹೊಂದಿದೆ’ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹೇಳಿದರು. ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ವಲಯದ ವಾರ್ಷಿಕ ಉತ್ಪಾದನೆಯು ₹1.10 ಲಕ್ಷ ಕೋಟಿಯಷ್ಟಿದೆ. ಕೆಲವು ಸಣ್ಣ ರೈತರು ವಾರ್ಷಿಕ ₹1 ಕೋಟಿ ಆದಾಯಗಳಿಸುತ್ತಿದ್ದಾರೆ. ಪಶು ಸಂಗೋಪನೆ ಮೀನು ಕೃಷಿಯಲ್ಲಿ ತೊಡಗಿದ್ದಾರೆ. ಹಾಗಾಗಿ ಬ್ಯಾಂಕ್‌ಗಳು ಸಮಗ್ರ ಸಾಲ ಯೋಜನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಸಾಲ ಮಂಜೂರಾತಿ ಹಂತದಲ್ಲಿ ಸೂಕ್ತ ದಾಖಲೆಗಳಿಲ್ಲವೆಂದು ರೈತರನ್ನು ಸತಾಯಿಸುವುದು ಸರಿಯಲ್ಲ. ಅಗತ್ಯ ದಾಖಲೆ ಸಲ್ಲಿಕೆಗೆ ಬಗ್ಗೆ ಅವರಿಗೆ ಮೊದಲೇ ಮಾಹಿತಿ ನೀಡಬೇಕು. ಸಕಾಲದಲ್ಲಿ ಅವುಗಳನ್ನು ಸ್ವೀಕರಿಸಿ ಸಾಲ ನೀಡುವುದು ಬ್ಯಾಂಕ್‌ಗಳ ಜವಾಬ್ದಾರಿ ಎಂದರು.

ರಾಜ್ಯ ಸರ್ಕಾರ ಕೈಗೊಳ್ಳುವ ಅಭಿವೃದ್ಧಿ ಚಟುವಟಿಕೆಗಳಿಗೆ ನಬಾರ್ಡ್‌ ಪೂರಕವಾಗಿ ಸ್ಪಂದಿಸಲಿದೆ
-ಟಿ. ರಮೇಶ್‌, ಮುಖ್ಯ ಪ್ರಧಾನ ವ್ಯವಸ್ಥಾಪಕ ನಬಾರ್ಡ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.