ADVERTISEMENT

ನಬಾರ್ಡ್‌ ಆದ್ಯತಾ ಪತ್ರ ಬಿಡುಗಡೆ: ₹4.99 ಲಕ್ಷ ಕೋಟಿ ಸಾಲ ವಿತರಿಸುವ ಗುರಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 16:00 IST
Last Updated 27 ಫೆಬ್ರುವರಿ 2026, 16:00 IST
ನಬಾರ್ಡ್‌ ಸಿದ್ಧಪಡಿಸಿರುವ ಆದ್ಯತಾ ಪತ್ರವನ್ನು (ಸ್ಟೇಟ್‌ ಫೋಕಸ್ ಪೇಪರ್) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್‌ ಅವರು ಶುಕ್ರವಾರ ಬಿಡುಗಡೆಗೊಳಿಸಿದರು
ನಬಾರ್ಡ್‌ ಸಿದ್ಧಪಡಿಸಿರುವ ಆದ್ಯತಾ ಪತ್ರವನ್ನು (ಸ್ಟೇಟ್‌ ಫೋಕಸ್ ಪೇಪರ್) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್‌ ಅವರು ಶುಕ್ರವಾರ ಬಿಡುಗಡೆಗೊಳಿಸಿದರು   

ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನಿಂದ (ನಬಾರ್ಡ್) ಕರ್ನಾಟಕದ ಆದ್ಯತಾ ವಲಯಕ್ಕೆ 2026–27ನೇ ಆರ್ಥಿಕ ವರ್ಷದಲ್ಲಿ ₹4.99 ಲಕ್ಷ ಕೋಟಿ ಸಾಲ ವಿತರಿಸುವ ಗುರಿ ನಿಗದಿಪಡಿಸಲಾಗಿದೆ.

2025–26ನೇ ಸಾಲಿನಡಿ ₹4.47 ಲಕ್ಷ ಕೋಟಿ ಸಾಲ ವಿತರಿಸುವ ಗುರಿ ನಿಗದಿಯಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇ 12ರಷ್ಟು ಹೆಚ್ಚಳವಾಗಿದೆ. ವಿವಿಧ ಬ್ಯಾಂಕ್‌ಗಳ ಮೂಲಕ ಈ ಸಾಲ ವಿತರಣೆಯ ಗುರಿ ಹೊಂದಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಿ ಆದ್ಯತಾ ವಲಯಗಳಿಗೆ ಅಗತ್ಯವಿರುವ ಆರ್ಥಿಕ ನೆರವಿನ ಕುರಿತು ನಬಾರ್ಡ್‌ ಸಿದ್ಧಪಡಿಸಿರುವ ಈ ಆದ್ಯತಾ ಪತ್ರವನ್ನು (ಸ್ಟೇಟ್‌ ಫೋಕಸ್ ಪೇಪರ್) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್‌ ಅವರು ಶುಕ್ರವಾರ ಬಿಡುಗಡೆಗೊಳಿಸಿದರು.

ADVERTISEMENT

ನಮ್ಮ ಆರೋಗ್ಯ ಇಲಾಖೆಗೂ ನಬಾರ್ಡ್ ಸಾಕಷ್ಟು ಅನುದಾನ ನೀಡುತ್ತಿದೆ. ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ರಸ್ತೆಗಳ ನಿರ್ಮಾಣಕ್ಕೆ ಸಹಕಾರ ನೀಡುತ್ತಿದೆ ಎಂದ ಸಚಿವರು ರಾಜ್ಯದ ಗ್ರಾಮೀಣ ಭಾಗದಲ್ಲಿ ನಬಾರ್ಡ್ ಆರೋಗ್ಯ ಜಾಗೃತಿ ಅಭಿಯಾನಗಳನ್ನು ನಡೆಸಲು ಮುಂದಾಗಬೇಕಿದೆ ಎಂದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬೇಕಿದೆ. ಕೃಷಿ, ಎಂಎಸ್‌ಎಂಇ, ಶಿಕ್ಷಣ, ವಸತಿ, ಸಾಮಾಜಿಕ ಮೂಲಸೌಕರ್ಯ ಮತ್ತು ನವೀಕರಿಸಬಹುದಾದ ಇಂಧನ ವಲಯವು ಆದ್ಯತಾ ವಲಯಗಳಾಗಿವೆ. ಈ ವಲಯಗಳಲ್ಲಿ ಏನಾದರೂ ಸಮಸ್ಯೆಗಳಿದ್ದರೆ, ಬಗೆಹರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದರು.

ನಬಾರ್ಡ್‌ನ ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುರೇಂದ್ರ ಬಾಬು ಮಾತನಾಡಿ, ‘2026-27ನೇ ಆರ್ಥಿಕ ವರ್ಷಕ್ಕೆ ನಿಗದಿಪಡಿಸಿರುವ ₹4.99 ಲಕ್ಷ ಕೋಟಿ ಸಾಲದಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ₹2.27 ಲಕ್ಷ ಕೋಟಿ, (ಶೇ 45ರಷ್ಟು) ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆ (ಎಂಎಸ್ಎಂಇ) ₹2.14 ಲಕ್ಷ ಕೋಟಿ (ಶೇ 42ರಷ್ಟು) ಮತ್ತು ಇತರೆ ಆದ್ಯತೆ ವಲಯದ ಚಟುವಟಿಕೆಗಳಿಗೆ ₹0.57 ಲಕ್ಷ ಕೋಟಿ (ಶೇ 11.62ರಷ್ಟು)  ನಿಗದಿಪಡಿಸಲಾಗಿದೆ’ ಎಂದು ವಿವರಿಸಿದರು.

‘ಮುಂದಿನ ಆರ್ಥಿಕ ವರ್ಷದಲ್ಲಿ ₹4.99 ಲಕ್ಷ ಕೋಟಿ ಸಾಲ ನೀಡುವ ಗುರಿಯನ್ನು ನಬಾರ್ಡ್‌ ಹೊಂದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 12ರಷ್ಟು ಅಧಿಕವಾಗಿದ್ದು, ಆರೋಗ್ಯಕರ ಬೆಳವಣಿಗೆಯನ್ನು ಇದು ಪ್ರತಿಬಿಂಬಿಸುತ್ತಿದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಬೆಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕ ಕಾರ್ತಿಕೇಯನ್ ತಿಳಿಸಿದರು.

ಇದೇ ವೇಳೆ ನಬಾರ್ಡ್‌ ಸಿದ್ಧಪಡಿಸಿರುವ ನಾಲ್ಕು ಕಿರು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಭವೇಂದ್ರ ಕುಮಾರ್, ನಬಾರ್ಡ್‌ ಮತ್ತು ವಿವಿಧ ಬ್ಯಾಂಕ್‌ನ ಸಿಬ್ಬಂದಿ ಇದ್ದರು. 

ರೈತರಿಗೆ ತ್ವರಿತವಾಗಿ ನಬಾರ್ಡ್‌ ಸಾಲ ಸೌಲಭ್ಯ ನೀಡುತ್ತಿದೆ. ರಾಜ್ಯದ ಕಟ್ಟಕಡೆಯ ರೈತನಿಗೂ ಈ ಸೌಲಭ್ಯ ಸಿಗಬೇಕು ಎನ್ನುವುದು ನಮ್ಮ ಆಶಯ 
ದಿನೇಶ್ ಗುಂಡೂರಾವ್‌ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ
ಚೆಕ್‌ ಹಸ್ತಾಂತರ
ನಬಾರ್ಡ್‌ನ ಅಂಗ ಸಂಸ್ಥೆಯಾದ ನ್ಯಾಬ್‌ ಕಿಸಾನ್‌ ಎರಡು ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) ಚೆಕ್‌ ಅನ್ನು ಕಾರ್ಯಕ್ರಮದಲ್ಲಿ ಹಸ್ತಾಂತರಿಸಿತು. ವಿಜಯಪುರ ಜಿಲ್ಲೆಯ ವಾಗ್ದೇವಿ ಎಫ್‌ಪಿಒಗೆ ₹50 ಲಕ್ಷ ಮತ್ತು ಬೆಳಗಾವಿ ಜಿಲ್ಲೆಯ ಶ್ರೀ ಪಂಚಲಿಂಗೇಶ್ವರ ಎಫ್‌ಪಿಒಗೆ ₹45 ಲಕ್ಷದ ಮೊತ್ತದ ಚೆಕ್‌ ಅನ್ನು ನೀಡಿತು. ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗಾಗಿ ಈ ಸಾಲದ ನೆರವು ನೀಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.