ADVERTISEMENT

ಎನ್‌ಡಿಟಿವಿ ಸ್ಥಾಪಕರ ಶೇ 27 ಷೇರು ಅದಾನಿ ಸಮೂಹಕ್ಕೆ

ಪಿಟಿಐ
Published 23 ಡಿಸೆಂಬರ್ 2022, 16:27 IST
Last Updated 23 ಡಿಸೆಂಬರ್ 2022, 16:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನ್ಯೂ ಡೆಲ್ಲಿ ಟೆಲಿವಿಷನ್‌ ಲಿಮಿಟೆಡ್‌ನಲ್ಲಿ (ಎನ್‌ಡಿಟಿವಿ) ಹೊಂದಿರುವ ಒಟ್ಟು ಶೇಕಡ 32.26ರಷ್ಟು ಷೇರುಪಾಲಿನಲ್ಲಿ ಶೇ 27.26ರಷ್ಟನ್ನು ಅದಾನಿ ಸಮೂಹಕ್ಕೆ ಮಾರಾಟ ಮಾಡುವುದಾಗಿ ಎನ್‌ಡಿಟಿವಿ ಸ್ಥಾಪಕರಾದ ಪ್ರಣಯ್ ರಾಯ್‌ ಮತ್ತು ಅವರ ಪತ್ನಿ ರಾಧಿಕಾ ರಾಯ್‌ ಶುಕ್ರವಾರ ತಿಳಿಸಿದ್ದಾರೆ.

ಷೇರು ಮಾರಾಟದ ನಂತರ ಪ್ರವರ್ತಕರ ಬಳಿ ಎನ್‌ಡಿಟಿವಿಯ ಶೇ 5ರಷ್ಟು ಷೇರು‍ಪಾಲು ಮಾತ್ರವೇ ಉಳಿಯಲಿದೆ.

ಸ್ಥಾಪಕರ ಷೇರು ಸ್ವಾಧೀನಪಡಿಸಿಕೊಂಡ ಬಳಿಕ ಎನ್‌ಡಿಟಿವಿಯಲ್ಲಿ ಅತಿ ಹೆಚ್ಚಿನ ಷೇರುಪಾಲನ್ನು (ಶೇ 69.71) ಅದಾನಿ ಸಮೂಹ ಹೊಂದಲಿದೆ. ಸದ್ಯ ಸಮೂಹದ ಬಳಿ ಶೇ 37.44ರಷ್ಟು ಷೇರುಪಾಲು ಇದೆ.

ADVERTISEMENT

ಎನ್‌ಡಿಟಿವಿಯಲ್ಲಿ ಹೊಂದಿರುವ ಬಹುಪಾಲು ಷೇರುಗಳನ್ನು ಎಎಂಜಿ ಮೀಡಿಯಾ ನೆಟ್‌ವರ್ಕ್‌ಗೆ ಮಾರಾಟ ಮಾಡಲು ಒಪ್ಪಿಗೆ ನೀಡಿದ್ದೇವೆ ಎಂದು ಸ್ಥಾಪಕರು ಷೇರುಪೇಟೆಗೆ ಮಾಹಿತಿ ನೀಡಿದ್ದಾರೆ.

ಡಿಸೆಂಬರ್ 30 ಅಥವಾ ಆ ಬಳಿಕ ಷೇರು ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಎನ್‌ಡಿಟಿವಿ ಷೇರುಪೇಟೆಗೆ ತಿಳಿಸಿದೆ. ಆದರೆ ಮಾರಾಟದ ಮೊತ್ತವನ್ನು ಕಂಪನಿಯು ತಿಳಿಸಿಲ್ಲ.

ಎನ್‌ಡಿಟಿವಿಯ ಒಂದು ಷೇರಿನ ಬೆಲೆಯು 60 ದಿನಗಳ ವಹಿವಾಟಿನಲ್ಲಿ ಸರಾಸರಿ ₹368.43ರಷ್ಟು ಇದೆ. ಇದರ ಆಧಾರದ ಮೇಲೆ ಸ್ಥಾಪಕರು
1.75 ಕೋಟಿ ಷೇರುಗಳನ್ನು ಮಾರಾಟ ಮಾಡಿದರೆ ಅದರ ಮೊತ್ತವು ₹ 647.6 ಕೋಟಿ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.