
digital transformation
ನವದೆಹಲಿ: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಕೆ ಮಾಡುವ ಹಂತವನ್ನು ಭಾರತದ ಶೇಕಡ 47ರಷ್ಟು ಕಂಪನಿಗಳು ದಾಟಿದ್ದು, ‘ಜನರೇಟಿವ್ ಎ.ಐ.’ ತಂತ್ರಜ್ಞಾನವನ್ನು ಅವು ಒಂದಲ್ಲ ಒಂದು ಹಂತದಲ್ಲಿ ಸಕ್ರಿಯವಾಗಿ ಬಳಕೆ ಮಾಡುತ್ತಿವೆ ಎಂದು ಇ.ವೈ.–ಸಿಐಐ ಸಿದ್ಧಪಡಿಸಿದ ವರದಿಯೊಂದು ಹೇಳಿದೆ.
ಎ.ಐ. ತಂತ್ರಜ್ಞಾನದ ಬಗ್ಗೆ ಬಹಳಷ್ಟು ಭರವಸೆ ಇದೆಯಾದರೂ ಕಂಪನಿಗಳು ಅದರ ಮೇಲೆ ಮಾಡುತ್ತಿರುವ ಹೂಡಿಕೆಯು ಹೆಚ್ಚಾಗಿಲ್ಲ. ಶೇಕಡ 95ಕ್ಕಿಂತ ಹೆಚ್ಚು ಕಂಪನಿಗಳು ಎ.ಐ ಹಾಗೂ ಮೆಷಿನ್ ಲರ್ನಿಂಗ್ (ಎಂ.ಎಲ್) ಮೇಲಿನ ವೆಚ್ಚಗಳನ್ನು ತಮ್ಮ ಒಟ್ಟು ಐ.ಟಿ. ವೆಚ್ಚದ ಶೇಕಡ 20ಕ್ಕಿಂತ ಕಡಿಮೆ ಮಟ್ಟದಲ್ಲಿ ಇರಿಸಿಕೊಂಡಿವೆ.
‘ಶೇ 23ರಷ್ಟು ಕಂಪನಿಗಳು ಜನರೇಟಿವ್ ಎ.ಐ. ತಂತ್ರಜ್ಞಾನವನ್ನು ಪ್ರಾಯೋಗಿಕ ಹಂತದಲ್ಲಿ ಬಳಕೆ ಮಾಡುತ್ತಿವೆ. ಶೇ 47ರಷ್ಟು ಕಂಪನಿಗಳು ಇದನ್ನು ಪ್ರಾಯೋಗಿಕ ಹಂತ ದಾಟಿ ಸಕ್ರಿಯವಾಗಿ ಬಳಕೆ ಮಾಡುತ್ತಿವೆ... ಜನರೇಟಿವ್ ಎ.ಐ. ತಂತ್ರಜ್ಞಾನವು ಕೆಲಸಗಳ ಮೇಲೆ ಗಣನೀಯ ಪ್ರಮಾಣದಲ್ಲಿ ಪರಿಣಾಮ ಉಂಟುಮಾಡಲಿದೆ ಎಂದು ಉದ್ಯಮ ವಲಯದ ಶೇ 73ರಷ್ಟು ನಾಯಕರು ಭಾವಿಸಿದ್ದಾರೆ. ಶೇ 63ರಷ್ಟು ಮಂದಿ ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಿದ್ಧವಿರುವುದಾಗಿ ಹೇಳುತ್ತಿದ್ದಾರೆ’ ಎಂದು ವರದಿಯು ವಿವರಿಸಿದೆ.
ದೇಶದ 20 ಕೈಗಾರಿಕಾ ವಲಯಗಳ 200 ಕಂಪನಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಸರ್ಕಾರಿ ಸಂಸ್ಥೆಗಳು, ಸರ್ಕಾರಿ ಉದ್ದಿಮೆಗಳು, ನವೋದ್ಯಮಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ), ಬಹುರಾಷ್ಟ್ರೀಯ ಕಂಪನಿಗಳ ಭಾರತದ ಶಾಖೆಗಳನ್ನು ಸಮೀಕ್ಷೆಯ ಭಾಗವಾಗಿ ಸಂಪರ್ಕಿಸಲಾಗಿದೆ.
ಎ.ಐ. ತಂತ್ರಜ್ಞಾನದ ಸಾಮರ್ಥ್ಯದ ಬಗ್ಗೆ ಬಹಳಷ್ಟು ವಿಶ್ವಾಸ ಇದ್ದರೂ, ಬಹುತೇಕ ಕಂಪನಿಗಳು ಎ.ಐ. ಆಧಾರಿತ ಪರಿವರ್ತನೆಯ ಮೇಲೆ ದೊಡ್ಡ ಮಟ್ಟದ ಹೂಡಿಕೆ ಮಾಡುವಲ್ಲಿ ಎಚ್ಚರಿಕೆಯ ಹೆಜ್ಜೆ ಇರಿಸುತ್ತಿವೆ.
‘ಕಂಪನಿಗಳು, ಸಂಸ್ಥೆಗಳು ಎ.ಐ. ತಂತ್ರಜ್ಞಾನದ ಯಶಸ್ಸನ್ನು ವೆಚ್ಚ ಕಡಿತ ಮತ್ತು ಉತ್ಪಾದಕತೆಯ ಆಧಾರದಲ್ಲಿ ಮಾತ್ರವೇ ಅಳೆಯುತ್ತಿಲ್ಲ. ಅವು ಸಮಯದ ಉಳಿತಾಯ, ದಕ್ಷತೆಯಲ್ಲಿ ಹೆಚ್ಚಳ, ವಹಿವಾಟಿನಲ್ಲಿ ಆದ ಏರಿಕೆಯಂತಹ ಮಾನದಂಡಗಳನ್ನು ಆಧರಿಸಿಯೂ ಎ.ಐ. ಯಶಸ್ಸನ್ನು ಅಂದಾಜು ಮಾಡುತ್ತಿವೆ’ ಎಂದು ತಿಳಿಸಲಾಗಿದೆ.
Highlights - null