ADVERTISEMENT

ಚೀನಾ ಆಮದು ಕಡಿತ, ಎಚ್ಚರಿಕೆ ನೀತಿ ಅಗತ್ಯ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ವರದಿ

ಪಿಟಿಐ
Published 8 ಜುಲೈ 2020, 16:04 IST
Last Updated 8 ಜುಲೈ 2020, 16:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳಿಗೆ ನಿರ್ಬಂಧ ವಿಧಿಸುವ ವಿಷಯದಲ್ಲಿ ಎಚ್ಚರಿಕೆಯ ಧೋರಣೆ ತಳೆಯಬೇಕು ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಶೋಧನಾ ವರದಿಯು ತಿಳಿಸಿದೆ.

ಭಾರತವು ಆಮದು ಮಾಡಿಕೊಳ್ಳುವ ಗರಿಷ್ಠ ಮತ್ತು ಅಗ್ಗದ ಬೆಲೆಯ ಸರಕುಗಳ ವಿಷಯದಲ್ಲಿ ಚೀನಾ ನಿಧಾನವಾಗಿ ಮತ್ತು ಸುಸ್ಥಿರ ರೀತಿಯಲ್ಲಿ ಗಟ್ಟಿ ತಳಹದಿ ನಿರ್ಮಿಸಿರುವುದು ಸ್ಪಷ್ಟವಾಗಿದೆ. ಏಕಾಏಕಿ ಆಮದು ಪ್ರಮಾಣವನ್ನು ಸ್ಥಗಿತಗೊಳಿಸುವ ದುಡುಕಿನ ನಿರ್ಧಾರಕ್ಕೆ ಬರಬಾರದು. ಚೀನಾದ ಮೇಲಿನ ಆಮದು ಅವಲಂಬನೆಯನ್ನು ಹಂತ ಹಂತವಾಗಿ ತಗ್ಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಬ್ಯಾಂಕ್‌ನ ಸಂಶೋಧನಾ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಅಗ್ಗದ ವಸ್ತುವಿನಿಂದ ಹಿಡಿದು, ದುಬಾರಿ ಬೆಲೆಯ ಭಾರಿ ಯಂತ್ರೋಪಕರಣ, ಎಲೆಕ್ಟ್ರಿಕ್‌ ಸೇರಿದಂತೆ ಎಲ್ಲ ಬಗೆಯ ಸರಕುಗಳನ್ನು ಚೀನಾ ಭಾರತಕ್ಕೆ ರಫ್ತು ಮಾಡುತ್ತಿದೆ. ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳಿಗೆ ಅಗತ್ಯವಾದ ಸರಕುಗಳನ್ನು ಒದಗಿಸುವ ವಿಷಯದಲ್ಲಿ ಭಾರತದಲ್ಲಿ ಅನುಕೂಲಕರ ವಾತಾವರಣ ಇದೆ. ಇಂತಹ ಸರಕುಗಳ ಆಮದಿನ ಮೇಲೆ ಆರಂಭದಲ್ಲಿ ನಿರ್ಬಂಧ ವಿಧಿಸಬಹುದು.

ADVERTISEMENT

ಸದ್ಯಕ್ಕೆ ಭಾರತವು 6,844 ಉತ್ಪನ್ನಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ. ದೇಶಿ ಆರ್ಥಿಕತೆಯಲ್ಲಿ ಭದ್ರವಾಗಿ ತಳವೂರಿರುವ ದೇಶದಿಂದ ಎಲ್ಲ ಬಗೆಯ ಆಮದಿಗೆ ನಿರ್ಬಂಧ ವಿಧಿಸಬೇಕೆಂದು ಪ್ರತಿಪಾದಿಸುವುದು ಸಮಂಜಸವಲ್ಲ. ಹಾಗೇನಾದರೂ ಮಾಡಿದರೆ ತಯಾರಕರು ಮತ್ತು ಗ್ರಾಹಕರಿಗೆ ಉತ್ಪನ್ನಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ.

ಚೀನಾದ 59 ಆ್ಯಪ್‌ಗಳ ಮೇಲೆ ಭಾರತ ನಿಷೇಧ ವಿಧಿಸಿರುವುದರಿಂದ ದೇಶಿ ತಂತ್ರಜ್ಞಾನ ಕಂಪನಿಗಳು ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲು ಅವಕಾಶ ಒದಗಿದೆ.

ತನ್ನ ವಿಸ್ತಾರವಾದ ಐ.ಟಿ ವಲಯದ ನೆರವಿನಿಂದ ಭಾರತವು ಸೇವಾ ವಲಯದ ವಹಿವಾಟಿನ ಮೇಲೆ ಗಮನ ಕೇಂದ್ರೀಕರಿಸಬೇಕು. ಚೀನಾಕ್ಕೆ ರಫ್ತು ಮಾಡುವ ಸರಕುಗಳ ತಯಾರಿಕೆಯ ಸಾಮರ್ಥ್ಯ ಹೆಚ್ಚಿಸಬೇಕು. ಇಂತಹ ಕ್ರಮಗಳ ಮೂಲಕ ಚೀನಾ ಜತೆಗಿನ ವ್ಯಾಪಾರ ಸಮತೋಲನ ಸುಧಾರಿಸಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ಚೀನಾದ ಉತ್ಪನ್ನಗಳಿಗೆ ಭಾರತದಲ್ಲಿ ವಿಸ್ತೃತ ಮಾರುಕಟ್ಟೆ

ನಿರ್ಬಂಧ ವಿಧಿಸಿದರೆ ತಯಾರಕರು, ಗ್ರಾಹಕರಿಗೆ ತೊಂದರೆ

ವ್ಯಾಪಾರ ಸಮತೋಲನ ಸುಧಾರಣೆ ಕ್ರಮಗಳಿಗೆ ಸಲಹೆ

***

6,844

ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳು

59

ಚೀನಾದ ಆ್ಯಪ್‌ಗಳ ಮೇಲೆ ಭಾರತದ ನಿಷೇಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.