ನವದೆಹಲಿ: ಭಾರತ ಮತ್ತು ಒಮಾನ್ ನಡುವಿನ ಸಮಗ್ರ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ್‌ಟಿಎ) ಸಂಬಂಧಿಸಿದ ಮಾತುಕತೆ ಪೂರ್ಣಗೊಂಡಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ. ಈ ಒಪ್ಪಂದ ಜಾರಿಗೆ ಬಂದರೆ ದ್ವಿಪಕ್ಷೀಯ ವಹಿವಾಟು ಹಾಗೂ ಹೂಡಿಕೆಗಳು ಹೆಚ್ಚಲಿವೆ ಎಂದು ನಿರೀಕ್ಷಿಸಲಾಗಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆಯ ರಾಜ್ಯ ಸಚಿವ ಜಿತಿನ್ ಪ್ರಸಾದ್ ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
ಕೊಲ್ಲಿ ಸಹಕಾರ ಮಂಡಳಿಯ (ಜಿಸಿಸಿ) ದೇಶಗಳ ಪೈಕಿ ಒಮಾನ್ ದೇಶವು ಭಾರತದ ಸರಕು, ಸೇವೆಗಳನ್ನು ಆಮದು ಮಾಡಿಕೊಳ್ಳುವ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿದೆ. ಇದೇ ಬಗೆಯ ಎಫ್‌ಟಿಎ ಭಾರತ ಮತ್ತು ಯುಎಇ ನಡುವೆ ಈಗಾಗಲೇ ಜಾರಿಯಲ್ಲಿ ಇದೆ.
2020ರ ನಂತರದಲ್ಲಿ ಭಾರತವು ಐದು ವಾಣಿಜ್ಯ ಪಾಲುದಾರರ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಪ್ರತ್ಯೇಕ ಉತ್ತರವೊಂದರಲ್ಲಿ ಸಚಿವರು ತಿಳಿಸಿದ್ದಾರೆ. ಮಾರಿಷಸ್, ಯುಎಇ, ಆಸ್ಟ್ರೇಲಿಯಾ, ಐರೋಪ್ಯ ಮುಕ್ತ ವ್ಯಾಪಾರ ಸಂಘಟನೆ (ಇಎಫ್‌ಟಿಎ) ಮತ್ತು ಬ್ರಿಟನ್ ಜೊತೆ ಭಾರತ ಈ ಒಪ್ಪಂದ ಮಾಡಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.