ADVERTISEMENT

2027–28ಕ್ಕೆ ಮೊದಲು ಹೊಸ ಐಟಿಆರ್‌ ನಮೂನೆ

ಪಿಟಿಐ
Published 8 ಡಿಸೆಂಬರ್ 2025, 15:44 IST
Last Updated 8 ಡಿಸೆಂಬರ್ 2025, 15:44 IST
.
.   

ನವದೆಹಲಿ: ಆದಾಯ ತೆರಿಗೆ ಕಾಯ್ದೆ – 2025ಕ್ಕೆ ಅನುಗುಣವಾಗಿರುವ ಹೊಸ ಆದಾಯ ತೆರಿಗೆ ವಿವರ (ಐಟಿಆರ್‌) ನಮೂನೆಗಳನ್ನು 2027–28ನೇ ಹಣಕಾಸು ವರ್ಷಕ್ಕೆ ಮೊದಲೇ ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸೋಮವಾರ ಹೇಳಿದ್ದಾರೆ.

ಐಟಿಆರ್‌ ನಮೂನೆಗಳ ಸರಳೀಕರಣಕ್ಕೆ ಸಂಬಂಧಿಸಿದ ಸಿಬಿಡಿಟಿ ಸಮಿತಿಯು ತೆರಿಗೆ ತಜ್ಞರ ಜೊತೆ, ಸಂಸ್ಥೆಗಳ ಜೊತೆ ಹಾಗೂ ಆದಾಯ ತೆರಿಗೆ ಇಲಾಖೆಯ ಕೆಲವು ಅಧಿಕಾರಿಗಳ ಜೊತೆ ವ್ಯಾಪಕ ಸಮಾಲೋಚನೆ ನಡೆಸುತ್ತಿದೆ ಎಂದು ಅವರು ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಆಗಸ್ಟ್‌ 21ರಂದು ರಾಷ್ಟ್ರಪತಿಯವರ ಅಂಕಿತ ಪಡೆದಿರುವ ಆದಾಯ ತೆರಿಗೆ ಕಾಯ್ದೆ – 2025 ಮುಂದಿನ ಹಣಕಾಸು ವರ್ಷದ ಮೊದಲ ದಿನದಿಂದ (2026ರ ಏಪ್ರಿಲ್‌ 1) ಜಾರಿಗೆ ಬರಲಿದೆ. ಇದು ಈಗ ಚಾಲ್ತಿಯಲ್ಲಿ ಇರುವ ಆದಾಯ ತೆರಿಗೆ ಕಾಯ್ದೆ – 1961ರ ಬದಲಿಗೆ ಜಾರಿಗೊಳ್ಳುತ್ತದೆ.

ADVERTISEMENT

ತ್ರೈಮಾಸಿಕ ಟಿಡಿಎಸ್‌ ನಮೂನೆ, ಐಟಿಆರ್‌ ನಮೂನೆ ಸೇರಿದಂತೆ ಹೊಸ ಕಾಯ್ದೆಯ ಅಡಿಯಲ್ಲಿ ಅಗತ್ಯವಿರುವ ಎಲ್ಲ ನಮೂನೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಹೊಸ ಕಾಯ್ದೆ ಜಾರಿಗೆ ಬಂದ ನಂತರದ ಮೊದಲ ತೆರಿಗೆ ವರ್ಷವಾದ 2026–27ಕ್ಕೆ ಸಂಬಂಧಿಸಿದ ಐಟಿಆರ್ ನಮೂನೆಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಅವುಗಳನ್ನು 2027–28ಕ್ಕೆ ಮೊದಲು ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ ಎಂದು ಚೌಧರಿ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಆದಾಯಕ್ಕೆ ಸಂಬಂಧಿಸಿದ ಐಟಿಆರ್‌ ನಮೂನೆಗಳನ್ನು ಸರಳೀಕರಿಸುವ ಕೆಲಸ ನಡೆಯುತ್ತಿದೆ, ಅವುಗಳನ್ನು 1961ರ ಕಾಯ್ದೆಗೆ ಅನುಗುಣವಾಗಿ ಅಧಿಸೂಚನೆಯಲ್ಲಿ ಪ್ರಕಟಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.