ADVERTISEMENT

ಆರ್ಥಿಕ ಪ್ಯಾಕೇಜ್‌: ವಿತ್ತೀಯ ಕೊರತೆ ಹೆಚ್ಚಳ ಸಾಧ್ಯತೆ

ಅನ್ನಪೂರ್ಣ ಸಿಂಗ್
Published 29 ಜೂನ್ 2021, 17:56 IST
Last Updated 29 ಜೂನ್ 2021, 17:56 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ನವದೆಹಲಿ: ಕೋವಿಡ್‌ನಿಂದ ಆಗಿರುವ ಕೆಟ್ಟ ಪರಿಣಾಮಗಳನ್ನು ನಿಭಾಯಿಸಲು ಕೇಂದ್ರ ಸರ್ಕಾರ ಸೋಮವಾರ ಘೋಷಿಸಿರುವ ಆರ್ಥಿಕ ಉತ್ತೇಜನಾ ಪ್ಯಾಕೇಜ್‌ನಿಂದ ಬೆಳವಣಿಗೆ ನಿಜಕ್ಕೂ ಸಾಧ್ಯವೇ ಎಂಬ ಅನುಮಾನವನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ.ಹೊಸದಾಗಿ ಘೋಷಿಸಿರುವ ಕ್ರಮಗಳಿಂದಾಗಿ ವಿತ್ತೀಯ ಕೊರತೆಯು ಗರಿಷ್ಠ ಶೇಕಡ 1ರಷ್ಟು ಹೆಚ್ಚಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯು ಶೇಕಡ 6.8ಕ್ಕಿಂತ ಹೆಚ್ಚಿರುತ್ತದೆ ಎಂದು ಎಸ್‌ಬಿಐ, ಎಂಕೆ ಗ್ಲೋಬಲ್ ಫೈನಾನ್ಶಿಯಲ್ ಸರ್ವಿಸಸ್ ಮತ್ತು ಕೇರ್ ರೇಟಿಂಗ್ಸ್‌ನ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. 2021–22ರಲ್ಲಿ ವಿತ್ತೀಯ ಕೊರತೆಯು ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಶೇ 6.8ರಷ್ಟು ಇರುತ್ತದೆ ಎಂದು ಕೇಂದ್ರ ಸರ್ಕಾರ ಅಂದಾಜು ಮಾಡಿದೆ.

‘ವಿತ್ತೀಯ ಕೊರತೆಯು ಈ ಮೊದಲು ಅಂದಾಜು ಮಾಡಿರುವ ಶೇ 6.8ರಷ್ಟಕ್ಕಿಂತ ಶೇ 0.5ರಷ್ಟು ಜಾಸ್ತಿ ಆಗುವ ಸಾಧ್ಯತೆ ಇದೆ’ ಎಂದು ಎಂಕೆ ಗ್ಲೋಬಲ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಮಾಧವಿ ಅರೋರಾ ಹೇಳಿದರು.

ADVERTISEMENT

ಸಣ್ಣ ಕೈಗಾರಿಕೆಗಳಿಗೆ ಸಾಲಕ್ಕೆ ಖಾತರಿ ಒದಗಿಸಲು ಹೆಚ್ಚುವರಿಯಾಗಿ ₹ 1.5 ಲಕ್ಷ ಕೋಟಿ ಮೀಸಲಿಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಪ್ರಕಟಿಸಿದ್ದಾರೆ. ಹಿಂದೆಯೂ ಘೋಷಿಸಲಾಗಿರುವ ಕೆಲವು ಆರ್ಥಿಕ ಪುನಶ್ಚೇತನ ಪ್ಯಾಕೇಜ್‌ ಮೊತ್ತಗಳನ್ನು ಪರಿಗಣಿಸಿದರೆ, ಈವರೆಗೆ ಘೋಷಿಸಿರುವ ಪ್ಯಾಕೇಜ್‌ನ ಮೊತ್ತವು ₹ 6.29 ಲಕ್ಷ ಕೋಟಿ ಆಗುತ್ತದೆ.

‘ಹೆಚ್ಚಿನ ವೆಚ್ಚ ಹಾಗೂ ಕಡಿಮೆ ಆದಾಯದ ಕಾರಣದಿಂದಾಗಿ ವಿತ್ತೀಯ ಕೊರತೆಯು ಹಾಲಿ ಆರ್ಥಿಕ ವರ್ಷದಲ್ಲಿ ₹ 17.04 ಲಕ್ಷ ಕೋಟಿಯಿಂದ ₹ 17.33 ಲಕ್ಷ ಕೋಟಿವರೆಗೆ ಜಾಸ್ತಿ ಆಗಬಹುದು. ವಿತ್ತೀಯ ಕೊರತೆಯ ಪ್ರಮಾಣವು ಶೇ 7.7ರಿಂದ ಶೇ 7.8ರಷ್ಟು ಇರಬಹುದು’ ಎಂದು ಕೇರ್ ರೇಟಿಂಗ್ಸ್‌ನ ವರದಿಯೊಂದು ಹೇಳಿದೆ.

ಸಾಲ ನೀಡಲು ₹ 70 ಸಾವಿರ ಕೋಟಿ
ಮುಂಬೈ
: ವಿವಿಧ ಉದ್ಯಮ ವಲಯಗಳಿಗೆ ಸಾಲ ಒದಗಿಸಲು ಸೋಮವಾರ ಘೋಷಿಸಿರುವ ಕ್ರಮಗಳು ಹಾಗೂ ಇತರ ನೆರವುಗಳಿಂದಾಗಿ ವಿತ್ತೀಯ ಕೊರತೆಯು ಶೇಕಡ 0.60ರಷ್ಟು ಹೆಚ್ಚಳ ಆಗಬಹುದು ಎಂದು ಎಸ್‌ಬಿಐ ಸಿದ್ಧಪಡಿಸಿರುವ ವರದಿ ಹೇಳಿದೆ.

ಹೊಸ ಕ್ರಮಗಳಿಂದಾಗಿ ಸಾಲ ಒದಗಿಸಲು ಬ್ಯಾಂಕ್‌ಗಳಿಗೆ ಹೆಚ್ಚುವರಿಯಾಗಿ ₹ 70 ಸಾವಿರ ಕೋಟಿ ಲಭ್ಯವಾಗಬಹುದು ಎಂದು ಎಸ್‌ಬಿಐನ ಮುಖ್ಯ ಅರ್ಥಶಾಸ್ತ್ರಜ್ಞ ಸೌಮ್ಯಕಾಂತಿ ಘೋಷ್ ಸಿದ್ಧಪಡಿಸಿರುವ ವರದಿಯು ಅಂದಾಜು ಮಾಡಿದೆ.

ಸೋಮವಾರದ ಘೋಷಣೆಗಳು ಮುಖ್ಯವಾಗಿ ಆರೋಗ್ಯ, ಪ್ರವಾಸೋದ್ಯಮ, ಕೃಷಿ ಮತ್ತು ಕಿರು ಹಣಕಾಸು ಸಂಸ್ಥೆಗಳನ್ನು ಗಮನದಲ್ಲಿ ಇರಿಸಿಕೊಂಡಿದೆ. ಸೋಮವಾರದ ಇತರ ಘೋಷಣೆಗಳು ಈಗಾಗಲೇ ಜಾರಿಯಲ್ಲಿ ಇರುವ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿ ಆಗಿಸುವಂತೆ ಇವೆ ಎಂದು ಘೋಷ್ ಅವರು ಹೇಳಿದ್ದಾರೆ.

ಎಸ್‌ಬಿಐ ವರದಿ
ಮುಂಬೈ (ಪಿಟಿಐ):
ವಿವಿಧ ಉದ್ಯಮ ವಲಯಗಳಿಗೆ ಸಾಲ ಒದಗಿಸಲು ಸೋಮವಾರ ಘೋಷಿಸಿರುವ ಕ್ರಮಗಳು ಹಾಗೂ ಇತರ ನೆರವುಗಳಿಂದಾಗಿ ವಿತ್ತೀಯ ಕೊರತೆಯು ಶೇಕಡ 0.60ರಷ್ಟು ಹೆಚ್ಚಳ ಆಗಬಹುದು ಎಂದು ಎಸ್‌ಬಿಐ ಸಿದ್ಧಪಡಿಸಿರುವ ವರದಿ ಹೇಳಿದೆ.

ಹೊಸ ಕ್ರಮಗಳಿಂದಾಗಿ ಸಾಲ ಒದಗಿಸಲು ಬ್ಯಾಂಕ್‌ಗಳಿಗೆ ಹೆಚ್ಚುವರಿಯಾಗಿ ₹ 70 ಸಾವಿರ ಕೋಟಿ ಲಭ್ಯವಾಗಬಹುದು ಎಂದು ಎಸ್‌ಬಿಐನ ಮುಖ್ಯ ಅರ್ಥಶಾಸ್ತ್ರಜ್ಞ ಸೌಮ್ಯಕಾಂತಿ ಘೋಷ್ ಸಿದ್ಧಪಡಿಸಿರುವ ವರದಿಯು ಅಂದಾಜು ಮಾಡಿದೆ.

ಸೋಮವಾರದ ಘೋಷಣೆಗಳು ಮುಖ್ಯವಾಗಿ ಆರೋಗ್ಯ, ಪ್ರವಾಸೋದ್ಯಮ, ಕೃಷಿ ಮತ್ತು ಕಿರು ಹಣಕಾಸು ಸಂಸ್ಥೆಗಳನ್ನು ಗಮನದಲ್ಲಿ ಇರಿಸಿಕೊಂಡಿದೆ. ಸೋಮವಾರದ ಇತರ ಘೋಷಣೆಗಳು ಈಗಾಗಲೇ ಜಾರಿಯಲ್ಲಿ ಇರುವ ಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿ ಆಗಿಸುವಂತೆ ಇವೆ ಎಂದು ಘೋಷ್ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.