ADVERTISEMENT

ಪೆಟ್ರೋಲ್‌ ಮೇಲಿನ ತೆರಿಗೆ ಕಡಿತ ಇಲ್ಲ: ಹಣಕಾಸು ಸಚಿವೆ ನಿರ್ಮಲಾ ಸ್ಪಷ್ಟನೆ

ಲೋಕಸಭೆಯಲ್ಲಿ ಮಾಹಿತಿ

ಪಿಟಿಐ
Published 2 ಡಿಸೆಂಬರ್ 2019, 18:30 IST
Last Updated 2 ಡಿಸೆಂಬರ್ 2019, 18:30 IST
ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್‌ – ಪಿಟಿಐ ಚಿತ್ರ
ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್‌ – ಪಿಟಿಐ ಚಿತ್ರ   

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್‌ಗಳ ಮೇಲಿನ ತೆರಿಗೆ ಕಡಿಮೆ ಮಾಡುವ ಯಾವುದೇ ಪ್ರಸ್ತಾವ ಪರಿಶೀಲನೆಯಲ್ಲಿ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

‘ವಿಶ್ವದ ಯಾವುದೇ ಭಾಗದಲ್ಲಿಯೂ ನಿರ್ದಿಷ್ಟ ಅವಧಿಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಸ್ಥಿರವಾಗಿರುವ ಉದಾಹರಣೆಗಳಿಲ್ಲ. ಸದ್ಯಕ್ಕಂತೂ ಈ ಇಂಧನಗಳ ಮೇಲಿನ ತೆರಿಗೆ ಪ್ರಮಾಣ ತಗ್ಗಿಸುವ ಆಲೋಚನೆ ಸರ್ಕಾರಕ್ಕೆ ಇಲ್ಲ. ಹೊಸ ತೆರಿಗೆಗಳನ್ನು ವಿಧಿಸುವ ಸಾಧ್ಯತೆಯೂ ಇಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

‘ಬಂಡವಾಳ ಹೂಡಿಕೆ ಆಕರ್ಷಿಸಲು ಮತ್ತು ಉದ್ಯೋಗ ಸೃಷ್ಟಿಸಲು ಕಂಪನಿ ತೆರಿಗೆಗಳನ್ನು ಕಡಿಮೆ ಮಾಡಲಾಗಿದೆ. ಅಮೆರಿಕ ಜತೆಗಿನ ವಾಣಿಜ್ಯ ಸಮರದ ಹಿನ್ನೆಲೆಯಲ್ಲಿ ಚೀನಾದಿಂದ ಹೊರ ಹೋಗಲು ಬಯಸಿರುವ ಬಹುರಾಷ್ಟ್ರೀಯ ಸಂಸ್ಥೆಗಳನ್ನು ಭಾರತದತ್ತ ಆಕರ್ಷಿಸುವುದು ಸರ್ಕಾರದ ಉದ್ದೇಶವಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಸದನದಲ್ಲಿ ‘ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆ 2019’ ಮಂಡಿಸಿ ಅವರು ಮಾತನಾಡುತ್ತಿದ್ದರು.

‘ಪ್ರವರ್ಧಮಾನಕ್ಕೆ ಬರುತ್ತಿರುವ ಬಹುತೇಕ ದೇಶಗಳು ಬಂಡವಾಳ ಹೂಡಿಕೆ ಆಕರ್ಷಿಸಲು ಪೈಪೋಟಿ ಮೇಲೆ ತೆರಿಗೆ ದರ ಕಡಿಮೆ ಮಾಡುತ್ತಿವೆ. ಈ ವಿಷಯದಲ್ಲಿ ನಾವು ಹಿಂದೆ ಬೀಳಬಾರದು ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ’ ಎಂದರು.

3.38 ಲಕ್ಷ ಕಂಪನಿಗಳ ನೋಂದಣಿ ರದ್ದು: ‘ಹಿಂದಿನ ಎರಡು ಹಣಕಾಸು ವರ್ಷಗಳಲ್ಲಿ 3.38 ಲಕ್ಷ ಕಂಪನಿಗಳನ್ನು ಅಧಿಕೃತ ದಾಖಲೆಗಳಿಂದ ತೆಗೆದು ಹಾಕಲಾಗಿದೆ’ ಎಂದು ಕಂಪನಿ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಅವರು ತಿಳಿಸಿದ್ದಾರೆ.

ಎರಡು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ವಾರ್ಷಿಕ ರಿಟರ್ನ್ಸ್‌ ಸಲ್ಲಿಸದ ಕಾರಣಕ್ಕೆ ಅವುಗಳ ನೋಂದಣಿ ರದ್ದುಪಡಿಸಲಾಗಿದೆ.

ಪೆಟ್ರೋಲ್‌; ತಿಂಗಳಲ್ಲಿ ₹ 2 ದುಬಾರಿ

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್‌ ಬೆಲೆ ಏರುಗತಿಯಲ್ಲಿದ್ದು ಈ ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದೆ. ಒಂದು ತಿಂಗಳ ಅವಧಿಯಲ್ಲಿ ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ ₹ 2ರಂತೆ ಹೆಚ್ಚಳಗೊಂಡಿದೆ. ಡೀಸೆಲ್‌ ಬೆಲೆ ಮಾತ್ರ ಸ್ಥಿರತೆ ಕಾಯ್ದುಕೊಂಡಿದೆ.

ನವೆಂಬರ್‌ 3ರಂದು ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ₹ 75.22 ಮತ್ತು ಡೀಸೆಲ್‌ ಬೆಲೆ ₹ 68.02ರಷ್ಟಿತ್ತು. ಈಗ (ಡಿ.1) ₹ 77.50ಕ್ಕೆ ತಲುಪಿ, ಪ್ರತಿ ಲೀಟರ್‌ಗೆ ₹ 2.28ರಂತೆ ತುಟ್ಟಿಯಾಗಿದೆ. ಡೀಸೆಲ್‌ ಬೆಲೆ ಈಗಲೂ
₹ 68.02ರಷ್ಟಿದೆ.

ಅಮೆರಿಕ ಮತ್ತು ಚೀನಾ ವಾಣಿಜ್ಯ ಒಪ್ಪಂದಕ್ಕೆ ಬರುವ ಮತ್ತು ತೈಲ ರಫ್ತು ದೇಶಗಳ ಸಂಘಟನೆಯು (ಒಪೆಕ್‌) ಕಚ್ಚಾ ತೈಲ ಉತ್ಪಾದನೆ ಕಡಿತಗೊಳಿಸುವ ಸಾಧ್ಯತೆಗಳ ಕಾರಣಕ್ಕೆ ಪೆಟ್ರೋಲ್‌ ಬೆಲೆ ಏರುಗತಿಯಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.