ADVERTISEMENT

ಎ.ಜಿ ಪ್ರಮಾಣ ಪತ್ರ ಸಲ್ಲಿಸದ ರಾಜ್ಯಗಳಿಗೆ ಜಿಎಸ್‌ಟಿ ಹಣ ಬಿಡುಗಡೆ ಇಲ್ಲ: ನಿರ್ಮಲಾ

ಪಿಟಿಐ
Published 12 ಡಿಸೆಂಬರ್ 2023, 15:25 IST
Last Updated 12 ಡಿಸೆಂಬರ್ 2023, 15:25 IST
<div class="paragraphs"><p>ನಿರ್ಮಲಾ ಸೀತಾರಾಮನ್‌</p></div>

ನಿರ್ಮಲಾ ಸೀತಾರಾಮನ್‌

   

–ಪಿಟಿಐ ಚಿತ್ರ

ನವದೆಹಲಿ: ‘ಯಾವುದೇ ರಾಜ್ಯಗಳಿಗೆ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಪರಿಹಾರ ಬಾಕಿ ಉಳಿಸಿಕೊಂಡಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.

ADVERTISEMENT

‘ಪಶ್ಚಿಮ ಬಂಗಾಳಕ್ಕೆ ಜಿಎಸ್‌ಟಿ ಪರಿಹಾರ ಮೊತ್ತ ಬಾಕಿ ಉಳಿದಿದೆ’ ಎಂಬ ತೃಣಮೂಲ ಕಾಂಗ್ರೆಸ್‌ ಸದಸ್ಯ ಸಾಕೇತ್‌ ಗೋಖಲೆ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯಗಳಿಗೆ ಬಾಕಿ ಮೊತ್ತ ಪಾವತಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಆದರೆ, ಎಷ್ಟು ಮೊತ್ತ ಸಿಗಬೇಕು ಎನ್ನುವ ಕುರಿತು ಆಯಾ ರಾಜ್ಯಗಳು ಅಕೌಂಟೆಂಟ್‌  ಜನರಲ್‌ (ಎ.ಜಿ) ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ’ ಎಂದು ಹೇಳಿದರು.

‘ಕೇಂದ್ರದಿಂದ ಹಣ ಪಾವತಿಯಲ್ಲಿ ವಿಳಂಬವಾಗುತ್ತದೆ ಎಂಬುದು ಸರಿಯಲ್ಲ. ಕೆಲವು ರಾಜ್ಯಗಳು ಇನ್ನೂ ಎ.ಜಿ ಪ್ರಮಾಣ ಪತ್ರ ಸಲ್ಲಿಸಿಲ್ಲ. ಅದನ್ನು ಸಲ್ಲಿಸದ ರಾಜ್ಯಗಳು ಅನಗತ್ಯವಾಗಿ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿವೆ. ಆ ರಾಜ್ಯಗಳ ಪಾಲಿನ ಬಾಕಿ ಬಿಡುಗಡೆ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

2022–23ನೇ ಸಾಲಿನಡಿ ಕರ್ನಾಟಕ ಹೊರತುಪಡಿಸಿದರೆ ಯಾವುದೇ ರಾಜ್ಯಗಳು ಪ್ರಮಾಣ ಪತ್ರ ಸಲ್ಲಿಸಿಲ್ಲ ಎಂದ ಅವರು, ಪಶ್ಚಿಮ ಬಂಗಾಳವು 2019–20ರ ಹಣಕಾಸು ವರ್ಷದಿಂದ 2022–23ರ ಮೊದಲ ತ್ರೈಮಾಸಿಕ ಅವಧಿವರೆಗಿನ ಪ್ರಮಾಣ ಪತ್ರ ನೀಡಿಲ್ಲ. ಸಲ್ಲಿಕೆ ಮಾಡಿದರೆ ಬಾಕಿ ಮೊತ್ತವನ್ನು ತ್ವರಿತವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಸರ್ಕಾರವು ಸಾಮಾಜಿಕ ಅಭಿವೃದ್ಧಿ ವಿಷಯದಲ್ಲಿ ರಾಜಿ ಮಾಡಿಕೊಳ್ಳದೆ ಆರ್ಥಿಕ ಮುಂದಾಲೋಚನೆ ಹೊಂದಿದೆ.
–ನಿರ್ಮಲಾ ಸೀತಾರಾಮನ್‌, ಕೇಂದ್ರ ಹಣಕಾಸು ಸಚಿವೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.