ನವದೆಹಲಿ: ಯುಪಿಐ ಬಳಸಿ ಮಾಡುವ ಪಾವತಿಗಳಿಗೆೆ ಎಂಡಿಆರ್ (ಮರ್ಚೆಂಟ್ ಡಿಸ್ಕೌಂಟ್ ರೇಟ್) ವಿಧಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯವು ಸ್ಪಷ್ಟಪಡಿಸಿದೆ.
‘ಯುಪಿಐ ಆಧಾರಿತ ಪಾವತಿಗಳಿಗೆ ಎಂಡಿಆರ್ ಶುಲ್ಕ ವಿಧಿಸಲಾಗುತ್ತದೆ ಎಂಬ ಹೇಳಿಕೆಗಳು, ಊಹೆಗಳು ಸಂಪೂರ್ಣವಾಗಿ ಆಧಾರರಹಿತ, ಸುಳ್ಳು ಮತ್ತು ತಪ್ಪುದಾರಿಗೆ ಎಳೆಯುವಂಥದ್ದು’ ಎಂದು ಸಚಿವಾಲಯವು ಎಕ್ಸ್ ಮೂಲಕ ತಿಳಿಸಿದೆ.
‘ಇಂತಹ ಆಧಾರವಿಲ್ಲದ ಊಹಾಪೋಹಗಳು ಜನರಲ್ಲಿ ಅನಗತ್ಯ ಅನಿಶ್ಚಿತತೆಗೆ, ಭೀತಿಗೆ ಮತ್ತು ಅನುಮಾನಗಳಿಗೆ ಕಾರಣವಾಗುತ್ತವೆ. ಯುಪಿಐ ಮೂಲಕ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಸರ್ಕಾರವು ಬದ್ಧವಾಗಿದೆ’ ಎಂದು ಸಚಿವಾಲಯ ಹೇಳಿದೆ.
ಗ್ರಾಹಕರಿಂದ ಡಿಜಿಟಲ್ ರೂಪದಲ್ಲಿ ಪಾವತಿ ಸ್ವೀಕರಿಸುವ ವರ್ತಕರು ಬ್ಯಾಂಕ್‌ಗೆ ನೀಡಬೇಕಿರುವ ಶುಲ್ಕವನ್ನು ಎಂಡಿಆರ್ ಎನ್ನಲಾಗುತ್ತದೆ. ಶುಲ್ಕದ ಮೊತ್ತವನ್ನು ಪಾವತಿ ಮೊತ್ತದ ಆಧಾರದಲ್ಲಿ ಲೆಕ್ಕಹಾಕಲಾಗುತ್ತದೆ.
ಯುಪಿಐ ಮೂಲಕ ಆಗುವ ದೊಡ್ಡ ಮೊತ್ತದ ಪಾವತಿಗಳಿಗೆ ಎಂಡಿಆರ್ ವಿಧಿಸುವ ಆಲೋಚನೆಯು ಸರ್ಕಾರಕ್ಕೆ ಇದೆ ಎಂಬ ವರದಿಗಳು ಬಂದ ಕಾರಣಕ್ಕೆ ಸಚಿವಾಲಯವು ಈ ಸ್ಪಷ್ಟನೆ ನೀಡಿದೆ.
ಮೇ ತಿಂಗಳಲ್ಲಿ ಯುಪಿಐ ಮೂಲಕ ನಡೆದಿರುವ ವಹಿವಾಟಿನ ಮೊತ್ತವು ದಾಖಲೆಯ ₹25.14 ಲಕ್ಷ ಕೋಟಿಗೆ ತಲುಪಿದೆ ಎಂದು ರಾಷ್ಟ್ರೀಯ ಪಾವತಿ ನಿಗಮದ (ಎನ್‌ಪಿಸಿಐ) ದತ್ತಾಂಶಗಳು ಹೇಳಿವೆ. ಇದು ಹಿಂದಿನ ತಿಂಗಳಲ್ಲಿ ಆಗಿದ್ದ ವಹಿವಾಟಿನ ಮೊತ್ತಕ್ಕೆ ಹೋಲಿಸಿದರೆ ಶೇಕಡ 5ರಷ್ಟು ಹೆಚ್ಚು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.