ನವದೆಹಲಿ: ರಾಜ್ಯಗಳ ಹಣಕಾಸಿನ ಸದೃಢತೆಗೆ ಸಂಬಂಧಿಸಿದಂತೆ ನೀತಿ ಆಯೋಗ ಪ್ರಕಟಿಸಿರುವ ಸೂಚ್ಯಂಕದಲ್ಲಿ ಒಡಿಶಾ, ಛತ್ತೀಸಗಢ, ಗೋವಾ ಮತ್ತು ಜಾರ್ಖಂಡ್, ‘ಅತ್ಯುತ್ತಮ ಸಾಧಕ ರಾಜ್ಯ’ ಶ್ರೇಯಕ್ಕೆ ಭಾಜನವಾಗಿವೆ.
ದೇಶದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ), ಜನಸಂಖ್ಯೆ, ಸಾರ್ವಜನಿಕ ವೆಚ್ಚ, ಆದಾಯ ಹಾಗೂ ಹಣಕಾಸಿನ ಸ್ಥಿರತೆಗೆ ರಾಜ್ಯಗಳು ನೀಡಿರುವ ಕೊಡುಗೆ ಆಧರಿಸಿ ಆಯೋಗವು ಮೊದಲ ಬಾರಿಗೆ ಈ ಹಣಕಾಸಿನ ಆರೋಗ್ಯ ಸೂಚ್ಯಂಕ– 2025 ಅನ್ನು ಸಿದ್ಧಪಡಿಸಿದೆ.
ಈ ಸೂಚ್ಯಂಕದಲ್ಲಿ 18 ರಾಜ್ಯಗಳಿವೆ. ಇವು ದೇಶದ ಜಿಡಿಪಿಗೆ ಶೇ 85ರಷ್ಟು ಕೊಡುಗೆ ನೀಡುತ್ತವೆ. ಮಹಾ ಲೆಕ್ಕ ಪರಿಶೋಧಕ ಮತ್ತು ಮಹಾಲೇಖಪಾಲರ ದತ್ತಾಂಶ ಆಧರಿಸಿ ಈ ರಾಜ್ಯಗಳ ಹಣಕಾಸಿನ ಸದೃಢತೆ ಬಗ್ಗೆ ವರದಿ ಸಿದ್ಧಪಡಿಸಲಾಗಿದೆ. ಇದರಡಿ ವಿಶೇಷ ವರ್ಗದ ರಾಜ್ಯಗಳನ್ನು ಸೇರ್ಪಡೆಗೊಳಿಸಿಲ್ಲ.
‘ರಾಜ್ಯಗಳ ಹಣಕಾಸಿನ ಸಾಮರ್ಥ್ಯದ ಅರಿಯುವುದು ಈ ವರದಿಯ ಉದ್ದೇಶವಾಗಿದೆ’ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ ಪನಗಾರಿಯಾ ಹೇಳಿದ್ದಾರೆ.
ಪಂಜಾಬ್, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯದ ಹಣಕಾಸಿನ ನಿರ್ವಹಣೆಯು ಕೆಟ್ಟ ಸ್ಥಿತಿಯಲ್ಲಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಮಹಾರಾಷ್ಟ್ರ, ಉತ್ತರ ಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಮತ್ತು ಕರ್ನಾಟಕವು ಮುಂಚೂಣಿ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಅತಿಹೆಚ್ಚು ಗಣಿ ಸಂಪನ್ಮೂಲ ಹೊಂದಿರುವ ಒಡಿಶಾದ ಸೂಚ್ಯಂಕ ಶೇ 67.8ರಷ್ಟು ದಾಖಲಾಗಿದೆ. ಸಾಲದ ಸೂಚ್ಯಂಕ (99.0) ಮತ್ತು ಸಾಲ ಸುಸ್ಥಿರತೆಯು (64.0) ಉತ್ತಮವಾಗಿದೆ. ಸಾರ್ವಜನಿಕ ವೆಚ್ಚದ ಗುಣಮಟ್ಟ ಮತ್ತು ಆದಾಯ ಕ್ರೋಡೀಕರಣವು ಸದೃಢವಾಗಿದೆ ಎಂದು ಹೇಳಿದೆ.
ಒಡಿಶಾದ ವಿತ್ತೀಯ ಕೊರತೆ ಕಡಿಮೆಯಿದೆ. ಸಾಲ ಮರುಪಾವತಿ ಸಾಮರ್ಥ್ಯ ಉತ್ತಮವಾಗಿದೆ. ಆ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯು (ಜಿಎಸ್‌ಡಿಪಿ) ಹೆಚ್ಚಿದೆ ಎಂದು ವಿವರಿಸಿದೆ.
ಕೇರಳ ಮತ್ತು ಪಂಜಾಬ್ ರಾಜ್ಯಗಳ ಸಾರ್ವಜನಿಕ ವೆಚ್ಚ ಮತ್ತು ಸಾಲದ ಸುಸ್ಥಿರತೆಯ ಗುಣಮಟ್ಟವು ಕಡಿಮೆಯಿದೆ. ಇದನ್ನು ಸರಿದೂಗಿಸಲು ಹೋರಾಡುತ್ತಿವೆ. ಪಶ್ಚಿಮ ಬಂಗಾಳವು ವರಮಾನ ಕ್ರೋಡೀಕರಣ ಮತ್ತು ಸಾಲದ ಸುಸ್ಥಿರತೆ ಕಾಯ್ದುಕೊಳ್ಳುವ ಸಮಸ್ಯೆ ಎದುರಿಸುತ್ತಿದೆ ಎಂದು ಹೇಳಿದೆ.
ಆಂಧ್ರಪ್ರದೇಶದಲ್ಲಿ ವಿತ್ತೀಯ ಶಿಸ್ತಿನ ಕೊರತೆ ಇದೆ. ಆ ರಾಜ್ಯವು ಅತಿಹೆಚ್ಚು ವಿತ್ತೀಯ ಕೊರತೆ ಎದುರಿಸುತ್ತಿದೆ. ಹರಿಯಾಣವು ಸಾಲದ ಶಿಸ್ತು ಕಾಪಾಡಿಕೊಳ್ಳುವಲ್ಲಿ ಎಡವಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.