ADVERTISEMENT

ಪೆಟ್ರೋಲ್, ಡೀಸೆಲ್ ಮಾರಾಟದಿಂದ ನಷ್ಟ: ಪರಿಹಾರ ಕೇಳಲಿರುವ ತೈಲ ಸಚಿವಾಲಯ

ಪಿಟಿಐ
Published 2 ಡಿಸೆಂಬರ್ 2022, 16:08 IST
Last Updated 2 ಡಿಸೆಂಬರ್ 2022, 16:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಚ್ಚಾ ತೈಲದ ಬೆಲೆ ಏರಿದ್ದಾಗಲೂ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸದೆ ಇದ್ದುದರಿಂದಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಿಗೆ ಆಗಿರುವ ನಷ್ಟವನ್ನು ಭರ್ತಿ ಮಾಡಿಕೊಡುವಂತೆ ಕೇಂದ್ರ ತೈಲ ಸಚಿವಾಲಯವು, ಹಣಕಾಸು ಸಚಿವಾಲಯವನ್ನು ಕೋರಲಿದೆ. ಎಂಟು ತಿಂಗಳಿಂದ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಬದಲಾವಣೆ ಆಗಿಲ್ಲ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂ ಕಂಪನಿಗಳು ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ಒಟ್ಟು ₹ 21,201 ಕೋಟಿ ನಷ್ಟ ಅನುಭವಿಸಿವೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡದೆ ಇದ್ದುದರಿಂದಾಗಿ ದೇಶದ ಅರ್ಥ ವ್ಯವಸ್ಥೆಗೆ ಅನುಕೂಲ ಆಗಿದೆ. ಅದಾಗಲೇ ಹೆಚ್ಚಿನ ಮಟ್ಟದಲ್ಲಿರುವ ಹಣದುಬ್ಬರ ದರವು ಇನ್ನಷ್ಟು ಹೆಚ್ಚುವುದನ್ನು ಇದು ತಡೆದಿದೆ. ಹೀಗಾಗಿ, ತೈಲ ಮಾರಾಟ ಕಂಪನಿಗಳು ತಮಗೆ ಆಗಿರುವ ನಷ್ಟವನ್ನು ಭರ್ತಿ ಮಾಡಿಕೊಡುವಂತೆ ಕೋರುವುದರಲ್ಲಿ ಅರ್ಥವಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ADVERTISEMENT

‘ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆ ಮೇಲೆ ಸರ್ಕಾರದ ನಿಯಂತ್ರಣ ಇಲ್ಲ. ತೈಲ ಮಾರಾಟ ಕಂಪನಿಗಳು ಬೆಲೆಯನ್ನು ತಾವೇ ನಿರ್ಧರಿಸಬೇಕು. ಆದರೆ ಕಂಪನಿಗಳು ಬೆಲೆ ಹೆಚ್ಚಿಸದೆ ಇರುವ ತೀರ್ಮಾನವನ್ನು ಸ್ವಯಂಪ್ರೇರಣೆಯಿಂದ ಕೈಗೊಂಡವು’ ಎಂದು ಅವರು ವಿವರಿಸಿದ್ದಾರೆ.

ಹಣಕಾಸು ಸಚಿವಾಲಯದ ಕದ ತಟ್ಟುವ ಮೊದಲು ತೈಲ ಸಚಿವಾಲಯವು ಇಡೀ ಹಣಕಾಸು ವರ್ಷದಲ್ಲಿ ಆಗಬಹುದಾದ ನಷ್ಟವನ್ನು ಲೆಕ್ಕ ಹಾಕಲಿದೆ. ಕಚ್ಚಾ ತೈಲ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗ ಕಡಿಮೆ ಆಗಿದ್ದರೂ, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟದಿಂದ ಈಗಲೂ ನಷ್ಟ ಅನುಭವಿಸುತ್ತಿವೆ.

ಕೇಂದ್ರ ಸರ್ಕಾರವು ಅಕ್ಟೋಬರ್‌ನಲ್ಲಿ ಈ ಮೂರು ಕಂಪನಿಗಳಿಗೆ ₹ 22 ಸಾವಿರ ಕೋಟಿ ನೀಡಿದೆ. ಎರಡು ವರ್ಷಗಳ ಅವಧಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಮಾರಾಟದಿಂದ ಆಗಿರುವ ನಷ್ಟವನ್ನು ಭರಿಸಿಕೊಳ್ಳುವುದಕ್ಕೆ ಈ ಕಂಪನಿಗಳಿಗೆ ಒಂದು ಬಾರಿಯ ನೆರವಿನ ರೂಪದಲ್ಲಿ ಈ ಹಣ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.