ADVERTISEMENT

100 ಡಾಲರ್‌ನತ್ತ ತೈಲ ದರ: ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ?

ಪಿಟಿಐ
Published 22 ಫೆಬ್ರುವರಿ 2022, 15:51 IST
Last Updated 22 ಫೆಬ್ರುವರಿ 2022, 15:51 IST
   

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಸಮೀಪಕ್ಕೆ ಬಂದಿದ್ದು, ಈಗ ಜಾರಿಯಲ್ಲಿ ಇರುವ ವಿಧಾನಸಭಾ ಚುನಾವಣೆಗಳ ನಂತರ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ.

ರಷ್ಯಾ–ಉಕ್ರೇನ್ ಬಿಕ್ಕಟ್ಟು ಇನ್ನಷ್ಟು ತೀವ್ರವಾದರೆ ತೈಲ ಪೂರೈಕೆಗೆ ಅಡಚಣೆ ಉಂಟಾಗಬಹುದು ಎಂಬ ಭೀತಿಯಿಂದ, ಏಪ್ರಿಲ್‌ನಲ್ಲಿ ಪೂರೈಕೆಯಾಗಬೇಕಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆಯು 98 ಡಾಲರ್‌ ದಾಟಿದೆ. ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ರಷ್ಯಾ ಶೇಕಡ 10ರಷ್ಟು ಪಾಲು ಹೊಂದಿದೆ.

ಭಾರತದ ಕಚ್ಚಾ ತೈಲದ ಒಟ್ಟು ಆಮದಿನಲ್ಲಿ ಶೇ 1ರಷ್ಟು, ಕಲ್ಲಿದ್ದಲಿನ ಒಟ್ಟು ಆಮದಿನಲ್ಲಿ ಶೇ 1.3ರಷ್ಟು ರಷ್ಯಾದಿಂದ ಬರುತ್ತವೆ. ರಷ್ಯಾದ ಗ್ಯಾಜ್‌ಪ್ರಾಂ ಕಂಪನಿಯಿಂದ ಭಾರತವು ಪ್ರತಿವರ್ಷ 25 ಲಕ್ಷ ಟನ್ ನೈಸರ್ಗಿಕ ಅನಿಲ ಖರೀದಿಸುತ್ತದೆ.

ADVERTISEMENT

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು 110 ದಿನಗಳಿಂದ ಹೆಚ್ಚಿಸಿಲ್ಲ. ಈಗಿನ ದರವು, ಕಚ್ಚಾ ತೈಲದ ಬೆಲೆ 82–83 ಡಾಲರ್‌ಗೆ ಸರಿಹೊಂದುವಂತೆ ಇದೆ. ಹಾಗಾಗಿ, ಚುನಾವಣೆ ಮುಗಿದ ತಕ್ಷಣ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗುವುದು ಖಚಿತ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.