ADVERTISEMENT

ಕಚ್ಚಾ ತೈಲ ಬೆಲೆ ಕುಸಿತಕ್ಕೆ ಕಾರಣವಾದ ಬ್ರಿಟನ್ನಿನ ಹೊಸ ಕೊರೊನಾ ವೈರಸ್‌

ರಾಯಿಟರ್ಸ್
Published 21 ಡಿಸೆಂಬರ್ 2020, 10:55 IST
Last Updated 21 ಡಿಸೆಂಬರ್ 2020, 10:55 IST
ತೈಲ ಬಾವಿ ಯಂತ್ರಗಳು (ಎಎಫ್‌ಪಿ)
ತೈಲ ಬಾವಿ ಯಂತ್ರಗಳು (ಎಎಫ್‌ಪಿ)   

ಟೋಕಿಯೊ: ಬ್ರಿಟನ್ನಿನಲ್ಲಿ ಕೊರೊನಾ ವೈರಾಣುವಿನ ಹೊಸ ಬಗೆಯು ಪತ್ತೆಯಾಗಿರುವ ಕಾರಣ, ತೈಲ ಬೇಡಿಕೆಯಲ್ಲಿ ತ್ವರಿತ ಚೇತರಿಕೆ ಇರುವುದಿಲ್ಲ ಎಂಬ ಆತಂಕದಿಂದಾಗಿ ಸೋಮವಾರ ಕಚ್ಚಾ ತೈಲದ ಬೆಲೆಯಲ್ಲಿ ಶೇಕಡ 3ರಷ್ಟಕ್ಕಿಂತ ಹೆಚ್ಚಿನ ಕುಸಿತ ಕಂಡುಬಂತು. ಹೊಸ ಬಗೆಯ ಕೊರೊನಾ ವೈರಾಣು ಪತ್ತೆಯಾದ ನಂತರ ಬ್ರಿಟಿನ್ನಿನ ಬಹುತೇಕ ಕಡೆ ವಹಿವಾಟುಗಳು ಸ್ಥಗಿತಗೊಂಡಿವೆ. ಯುರೋಪ್‌ ಖಂಡದಲ್ಲಿ ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದೆ.

ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 1.74 ಅಮೆರಿಕನ್‌ ಡಾಲರ್‌ನಷ್ಟು ಇಳಿಕೆ ಆಯಿತು. ಶುಕ್ರವಾರದ ವಹಿವಾಟಿನಲ್ಲಿ ಶೇಕಡ 1.5ರಷ್ಟು ಬೆಲೆ ಏರಿಕೆ ಕಂಡಿದ್ದ ಬ್ರೆಂಟ್ ಕಚ್ಚಾ ತೈಲವು, ಸೋಮವಾರ ಶೇಕಡ 3.3ರಷ್ಟು ಕುಸಿತ ದಾಖಲಿಸಿತು. ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೆಟ್‌ ಕಚ್ಚಾ ತೈಲದ ಬೆಲೆಯಲ್ಲಿ 1.66 ಡಾಲರ್‌ ಇಳಿಕೆ ಆಯಿತು.

ಕೋವಿಡ್‌–19 ಸಾಂಕ್ರಾಮಿಕಕ್ಕೆ ಲಸಿಕೆ ಲಭ್ಯವಾಗುತ್ತಿರುವುದು ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಹೊಸ ಭರವಸೆ ಮೂಡಿಸಿತ್ತು. ಕಚ್ಚಾ ತೈಲದ ದರವು ಏಳು ವಾರಗಳಿಂದ ಏರುಗತಿಯಲ್ಲಿ ಇತ್ತು. ‘ಆದರೆ, ಕೊರೊನಾ ವೈರಾಣುವಿನ ಹೊಸ ಬಗೆಯೊಂದು ಕಾಣಿಸಿಕೊಂಡ ಸಂಗತಿಯು ಹೂಡಿಕೆದಾರರ ಆಸೆಗಳನ್ನು ಹುಸಿಗೊಳಿಸಿದೆ’ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ADVERTISEMENT

‘ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 50 ಡಾಲರ್‌ಗಿಂತ ಕಡಿಮೆ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ. ಹಾಗೆಯೇ ಡಬ್ಲ್ಯುಟಿಐ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 45 ಡಾಲರ್‌ಗಿಂತ ಕಡಿಮೆ ಆಗಬಹುದು’ ಎಂದು ಅವರು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.