ADVERTISEMENT

ಒಂದು ಕೆ.ಜಿ ತೊಗರಿ ಬೇಳೆ ₹95 ಆಯಿತು! ಗ್ರಾಹಕರು ಖುಷ್! ರೈತರಿಗೆ ನಿರಾಸೆ

ಉತ್ಪಾದನೆ ಹೆಚ್ಚಳವೇ ಬೆಲೆ ಕಡಿಮೆಯಾಗಲು ಕಾರಣ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 20:36 IST
Last Updated 20 ಜೂನ್ 2025, 20:36 IST
ತೊಗರಿ ಬೇಳೆ
ತೊಗರಿ ಬೇಳೆ   

ಕಲಬುರಗಿ: ತೊಗರಿ ಕಣಜ ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಇಳುವರಿ ಬಂದಿರುವುದರ ಜೊತೆಗೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿಯೂ ಉತ್ಪಾದನೆ ಹೆಚ್ಚಿದ ಪರಿಣಾಮ ತೊಗರಿ ಬೇಳೆಯ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಮೂರ್ನಾಲ್ಕು ತಿಂಗಳ ಹಿಂದೆ ಪ್ರತಿ ಕೆ.ಜಿಗೆ ₹120 ಇದ್ದ ತೊಗರಿ ಬೇಳೆ ದರ ಈಗ ₹95ಕ್ಕೆ ಇಳಿಕೆ ಕಂಡಿದೆ. 

ಇದರಿಂದಾಗಿ ಕೈಗೆಟಕುವ ದರದಲ್ಲಿ ಗ್ರಾಹಕರು ತೊಗರಿ ಬೇಳೆ ಖರೀದಿಸಲು ಸಾಧ್ಯವಾಗುತ್ತಿದೆ. ಆದರೆ, ಕಳೆದ ವರ್ಷ ಕ್ವಿಂಟಲ್‌ಗೆ ₹12 ಸಾವಿರಕ್ಕೆ ಏರಿಕೆ ಕಂಡಿದ್ದ ತೊಗರಿ ದರ ಈ ಬಾರಿ ₹6,500ರಿಂದ ₹7 ಸಾವಿರ ಆಸುಪಾಸಿನಲ್ಲಿರುವುದರಿಂದ ರೈತರಿಗೆ ನಷ್ಟವಾಗುತ್ತಿದೆ.

ಕಳೆದ ವರ್ಷ ನೆಟೆ ರೋಗ ಬಂದಿದ್ದರಿಂದ ತೊಗರಿ ಉತ್ಪಾದನೆ ಕುಸಿದಿತ್ತು. ಈ ಬಾರಿ ಉತ್ತಮ ಇಳುವರಿ ಬಂದಿದ್ದರಿಂದ ದಾಲ್‌ ಮಿಲ್‌ನವರು ಪ್ರತಿ ಕ್ವಿಂಟಲ್‌ಗೆ ₹6,300ರಂತೆ ತೊಗರಿ ಖರೀದಿ ಮಾಡಿದ್ದಾರೆ. ಹೀಗಾಗಿ, ತೊಗರಿ ಬೇಳೆ ದರವೂ ಇಳಿಕೆಯಾಗಿದೆ.

ADVERTISEMENT

ಕೇಂದ್ರ ಸರ್ಕಾರವು ಬರ್ಮಾ, ಘಾನಾ, ದಕ್ಷಿಣ ಆಫ್ರಿಕಾ ದೇಶಗಳಿಂದ ಈ ಬಾರಿ ತೊಗರಿಯನ್ನು ಆಮದು ಮಾಡಿಕೊಂಡಿದ್ದರಿಂದ ತೊಗರಿ ಸಂಗ್ರಹ ಯಥೇಚ್ಛವಾಗಿದೆ. ದಾಲ್‌ ಮಿಲ್‌ಗಳು ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬೇಳೆಯನ್ನು ಉತ್ಪಾದನೆ ಮಾಡಿವೆ ಎನ್ನುತ್ತಾರೆ ವ್ಯಾಪಾರಿಗಳು.

‘ಈ ಬಾರಿ ಕಲಬುರಗಿ, ವಿಜಯಪುರ ಜಿಲ್ಲೆ ಹಾಗೂ ಪಕ್ಕದ ಆಂಧ್ರಪ್ರದೇಶ, ತೆಲಂಗಾಣದಲ್ಲೂ ವ್ಯಾಪಕವಾಗಿ ತೊಗರಿ ಬೆಳೆದಿದ್ದಾರೆ. ಇಳುವರಿ ಉತ್ತಮವಾಗಿ ಬಂದಿದೆಯಾದರೂ ತೊಗರಿ ಗುಣಮಟ್ಟ ಕಡಿಮೆ ಇದೆ. ಹೀಗಾಗಿ, ಕ್ವಿಂಟಲ್‌ಗೆ ಸರಾಸರಿ ₹6,300ರಂತೆ ತೊಗರಿ ಖರೀದಿ ಮಾಡಿದ್ದೇವೆ. ₹9,200ರಿಂದ ₹10 ಸಾವಿರದವರೆಗೆ ಪ್ರತಿ ಕ್ವಿಂಟಲ್ ತೊಗರಿ ಬೇಳೆಯನ್ನು ಮಾರಾಟ ಮಾಡುತ್ತಿದ್ದೇವೆ’ ಎಂದು ಗುಲಬರ್ಗಾ ದಾಲ್‌ ಮಿಲ್‌ ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ ಕೋಬಾಳ ಮಾಹಿತಿ ನೀಡಿದರು. 

‘ಮೂರ್ನಾಲ್ಕು ತಿಂಗಳ ಹಿಂದೆ ಪ್ರತಿ ಕೆ.ಜಿಗೆ ₹120 ಇದ್ದ ತೊಗರಿ ಬೇಳೆ ದರವು ಈಗ ₹95ರಿಂದ ₹100ರಂತೆ ಮಾರಾಟವಾಗುತ್ತಿದೆ. ಒಂದು ತಿಂಗಳ ಬಳಿಕ ಮತ್ತೆ ಕೊಂಚ ದರ ಏರಿಕೆಯಾಗಬಹುದು’ ಎನ್ನುತ್ತಾರೆ ಕಲಬುರಗಿಯ ಗಂಜ್ ಪ್ರದೇಶದ ಕಿರಾಣಿ ವ್ಯಾಪಾರಿ ರವಿಶಂಕರ ಜಮಾದಾರಖಾನಿ.

2024ರ ಜುಲೈನಲ್ಲಿ ಪ್ರತಿ ಕೆ.ಜಿ ತೊಗರಿ ಬೇಳೆ ದರವು ₹180ಕ್ಕೆ ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.