ADVERTISEMENT

ಈರುಳ್ಳಿ ರಫ್ತು ನಿಷೇಧ, ದಾಸ್ತಾನಿಗೆ ಮಿತಿ ವಿಧಿಸಿದ ಕೇಂದ್ರ ಸರ್ಕಾರ

ಮಾರುಕಟ್ಟೆಗೆ ಪೂರೈಕೆ ಹೆಚ್ಚಿಸಲು, ಬೆಲೆ ನಿಯಂತ್ರಿಸಲು ಕ್ರಮ

ಪಿಟಿಐ
Published 29 ಸೆಪ್ಟೆಂಬರ್ 2019, 20:15 IST
Last Updated 29 ಸೆಪ್ಟೆಂಬರ್ 2019, 20:15 IST
   

ನವದೆಹಲಿ: ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಈರುಳ್ಳಿ ರಫ್ತು ನಿಷೇಧಿಸಿದೆ. ಇದೇ ವೇಳೆ ಮಾರುಕಟ್ಟೆಗೆ ಪೂರೈಕೆಯಲ್ಲಿ ಕೊರತೆ ಆಗದಂತೆ ತಡೆಯಲು ವರ್ತಕರಿಗೆ ದಾಸ್ತಾನು ಮಿತಿಯನ್ನೂ ವಿಧಿಸಿದೆ.

ದೇಶದಾದ್ಯಂತ ಈರುಳ್ಳಿ ಚಿಲ್ಲರೆ ಮಾರಾಟ ದರ ಕೆ.ಜಿಗೆ ಗರಿಷ್ಠ ₹80 ರವರೆಗೂ ತಲುಪಿದೆ. ಹೀಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

‘ಎಲ್ಲಾ ಗಾತ್ರದ ಈರುಳ್ಳಿ ರಫ್ತು ಮಾಡುವುದರ ಮೇಲೆಯೂ ತಕ್ಷಣದಿಂದ ನಿಷೇಧ ಜಾರಿಗೆ ಬಂದಿದೆ’ ಎಂದುವಾಣಿಜ್ಯ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ) ಭಾನುವಾರ ಅಧಿಸೂಚನೆ ಹೊರಡಿಸಿದೆ.

ADVERTISEMENT

ಮಿತಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕನಿಷ್ಠ ರಫ್ತು ದರಕ್ಕಿಂತಲೂ (ಎಂಇಪಿ) ಕಡಿಮೆ ಬೆಲೆಗೆ ಬಾಂಗ್ಲಾದೇಶ ಮತ್ತು ಶ್ರೀಲಂಕಾಕ್ಕೆ ರಫ್ತು ಮಾಡುವುದನ್ನೂ ತಕ್ಷಣದಿಂದಲೇ ನಿಲ್ಲಿಸಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ತಿಳಿಸಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಿಂದ ಈರುಳ್ಳಿ ಪೂರೈಕೆ
ಯಲ್ಲಿ ಅಡಚಣೆ ಉಂಟಾಗಿತ್ತು. ಹೀಗಾಗಿ ಆಗಸ್ಟ್‌ನಿಂದಲೂ ಈರುಳ್ಳಿ ದರದಲ್ಲಿ ಭಾರಿ ಏರಿಕೆ ಕಂಡುಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.