ADVERTISEMENT

ಈರುಳ್ಳಿ: ಬೆಂಗಳೂರಿನಲ್ಲಿ ತುಟ್ಟಿ, ಉದಯಪುರದಲ್ಲಿ ಅಗ್ಗ

ಪಿಟಿಐ
Published 2 ನವೆಂಬರ್ 2020, 17:00 IST
Last Updated 2 ನವೆಂಬರ್ 2020, 17:00 IST
ಈರುಳ್ಳಿ 
ಈರುಳ್ಳಿ    

ನವದೆಹಲಿ: ಈರುಳ್ಳಿ ಬೆಲೆಯು ಬೆಂಗಳೂರಿನ ಚಿಲ್ಲರೆ ಮಾರುಕಟ್ಟೆಗಳಲ್ಲಿ ಅತ್ಯಂತ ದುಬಾರಿ ಮಟ್ಟದಲ್ಲಿಯೇ ಇದೆ. ಈರುಳ್ಳಿಯನ್ನು ಅತಿಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಮೂರನೆಯ ಸ್ಥಾನದಲ್ಲಿ ಇದ್ದರೂ, ಪ್ರತಿ ಕಿಲೋ ಈರುಳ್ಳಿಯ ಬೆಲೆಯು ಬೆಂಗಳೂರಿನಲ್ಲಿ ಸೋಮವಾರ ₹ 100 ಆಗಿತ್ತು ಎಂಬುದನ್ನು ಸರ್ಕಾರದ ಅಂಕಿ–ಅಂಶಗಳು ಹೇಳುತ್ತಿವೆ.

ಕೇಂದ್ರ ಸರ್ಕಾರವು ಒಟ್ಟು 114 ನಗರಗಳಲ್ಲಿನ ಈರುಳ್ಳಿ ಬೆಲೆಯ ಮೇಲೆ ಪ್ರತಿನಿತ್ಯ ಗಮನ ಇರಿಸುತ್ತದೆ. ಈ ಪೈಕಿ ರಾಜಸ್ಥಾನದ ಉದಯಪುರ ಮತ್ತು ಪಶ್ಚಿಮ ಬಂಗಾಳದ ರಾಮಪುರಹಾಟದಲ್ಲಿ ಈರುಳ್ಳಿ ಬೆಲೆಯು ಸೋಮವಾರ ಪ್ರತಿ ಕಿಲೋಗೆ ₹ 35 ಆಗಿತ್ತು. ಸೋಮವಾರ ಅಖಿಲ ಭಾರತ ಮಟ್ಟದಲ್ಲಿ ಈರುಳ್ಳಿಯ ಸರಾಸರಿ ಬೆಲೆಯು ಕಿಲೋಗೆ
₹ 70 ಆಗಿತ್ತು.

ಈರುಳ್ಳಿಯನ್ನು ಬೆಳೆಯುವ ಪ್ರದೇಶಗಳ ಗ್ರಾಹಕರು ಕೂಡ ಹೆಚ್ಚಿನ ಬೆಲೆ ತೆರುತ್ತಿದ್ದಾರೆ. ದೇಶದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯುವುದು ಮಹಾರಾಷ್ಟ್ರದಲ್ಲಿ. ಮಹಾರಾಷ್ಟ್ರದ ರಾಜಧಾನಿ ಮುಂಬೈನ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಕಿಲೋಗೆ ₹ 77 ಆಗಿತ್ತು.

ADVERTISEMENT

ಈರುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ದೆಹಲಿಯಲ್ಲಿ ಈರುಳ್ಳಿ ದರ ₹ 65 ಆಗಿತ್ತು. ಚೆನ್ನೈನಲ್ಲಿ ಕಿಲೋ ಈರುಳ್ಳಿ ದರ ₹ 72 ಆಗಿತ್ತು ಎಂದು ಸರ್ಕಾರದ ಅಂಕಿ–ಅಂಶಗಳು ಹೇಳುತ್ತವೆ.

ಸರ್ಕಾರದ ದಾಖಲೆಗಳಲ್ಲಿ ನಮೂದಾಗಿರುವ ಚಿಲ್ಲರೆ ಮಾರುಕಟ್ಟೆಯ ಬೆಲೆಯು ಮಾರುಕಟ್ಟೆಯಲ್ಲಿನ ವಾಸ್ತವ ಬೆಲೆಗಿಂತ ಪ್ರತಿ ಕಿಲೋ ₹ 10ರಿಂದ ₹ 20ರಷ್ಟು ಕಡಿಮೆ ಇರುವುದಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅತಿವೃಷ್ಟಿಯಿಂದಾಗಿ ಈರುಳ್ಳಿ ಬೆಳೆ ಹಾಳಾಗಿದ್ದು, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಈರುಳ್ಳಿ ಪೂರೈಕೆ ಆಗುತ್ತಿಲ್ಲ. ಇದರಿಂದಾಗಿ ಬೆಲೆ ಹೆಚ್ಚಾಗಿದೆ. ಬೆಲೆ ಏರಿಕೆಯನ್ನು ತಡೆಯಲು ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ನಿಷೇಧ, ವರ್ತಕರು ಸಂಗ್ರಹ ಮಾಡಿ ಇರಿಸಿಕೊಳ್ಳಬಹುದಾದ ಈರುಳ್ಳಿಯ ಪ್ರಮಾಣದ ಮೇಲೆ ಮಿತಿ ಮುಂತಾದ ಕ್ರಮಗಳನ್ನು ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.