ADVERTISEMENT

ತೈಲ ಉತ್ಪಾದನೆ ಕಡಿತ: ಮುರಿದು ಬಿದ್ದ ಸಂಧಾನ

ಜಾಗತಿಕ ಮಾರುಕಟ್ಟೆ

ಏಜೆನ್ಸೀಸ್
Published 6 ಮಾರ್ಚ್ 2020, 20:00 IST
Last Updated 6 ಮಾರ್ಚ್ 2020, 20:00 IST
   

ವಿಯೆನ್ನಾ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೇಡಿಕೆ ಕುಸಿಯುತ್ತಿರುವುದರಿಂದ, ಉತ್ಪಾದನೆತಗ್ಗಿಸುವ ಕುರಿತು ಶುಕ್ರವಾರ ನಡೆದ ಮಾತುಕತೆ ಮುರಿದು ಬಿದ್ದಿದೆ.

ಒಪೆಕ್‌ ಮತ್ತು ರಷ್ಯಾ ಮಧ್ಯೆ ಮಾತುಕತೆ ನಿಗದಿಯಾಗಿತ್ತು. ಉತ್ಪಾದನೆ ಕಡಿತಗೊಳಿಸುವ ಬಗ್ಗೆ ಸಭೆಯಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಕಚ್ಚಾ ತೈಲದ ಬೆಲೆ ಏರಿಕೆ ದಾಖಲಿಸಿತು.

ಡಿಸೆಂಬರ್‌ನಲ್ಲಿ ನಡೆದ ಸಭೆಯಲ್ಲಿ ದಿನಕ್ಕೆ 5 ಲಕ್ಷ ಬ್ಯಾರಲ್‌ಗಳಷ್ಟು ಉತ್ಪಾದನೆ ತಗ್ಗಿಸಲು ನಿರ್ಧರಿಸಲಾಗಿತ್ತು. ಆದರೆ, ಈ ಬಾರಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ತಗ್ಗಿಸುವ ಬಗ್ಗೆ ಒಮ್ಮತ ಕಂಡುಬಂದಿರಲಿಲ್ಲ.

ADVERTISEMENT

ವಿಶ್ವದಲ್ಲಿಯೇ ಅತಿ ಹೆಚ್ಚು ತೈಲ ಉತ್ಪಾದಿಸುವಲ್ಲಿ ರಷ್ಯಾ ಮತ್ತು ಸೌದಿ ಅರೇಬಿಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಹೀಗಾಗಿಉತ್ಪಾದನೆ ತಗ್ಗಿಸುವ ನಿರ್ಧಾರಕ್ಕೆ ಬರಲು ಸೌದಿ ಅರೇಬಿಯಾ ಮತ್ತು ರಷ್ಯಾದ ಒಪ್ಪಿಗೆ ಅಗತ್ಯವಾಗಿತ್ತು.

ಉತ್ಪಾದನೆಯನ್ನು ದಿನಕ್ಕೆ 10ಲಕ್ಷ ಬ್ಯಾರಲ್‌ಗಳಷ್ಟು ಕಡಿಮೆ ಮಾಡಲು ಒಪೆಕ್‌ ಸಿದ್ಧವಿದೆ. ಆದರೆ, ರಷ್ಯಾ ಹಿಂದೇಟು ಹಾಕುತ್ತಿದೆ.

‘ಸದ್ಯದ ತೈಲ ದರವು ಒಪ್ಪಿಕೊಳ್ಳುವ ಮಟ್ಟದಲ್ಲಿ ಇದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದರು. ಹೀಗಾಗಿ ಉತ್ಪಾದನೆ ತಗ್ಗಿಸಲು ರಷ್ಯಾ ಒಪ್ಪುವುದು ಬಹುತೇಕ ಅನುಮಾನವಿತ್ತು.

‘ದಿನಕ್ಕೆ 15 ಲಕ್ಷ ಬ್ಯಾರಲ್‌ಗಳಷ್ಟು ತೈಲ ಉತ್ಪಾದನೆಯನ್ನು ತಗ್ಗಿಸುವಂತೆ ಒಪೆಕ್‌ಗೆ ಶಿಫಾರಸು ಮಾಡಲಾಗುವುದು’ ಎಂದು ಇರಾನ್‌ನ ಇಂಧನ ಸಚಿವ ಬಿಜಿನ್‌ ನಮ್ದಾರ್ ಜಗಾನೆ ಹೇಳಿದ್ದರು.

‘ಕೋವಿಡ್‌–19’ ವೈರಸ್‌ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಕಚ್ಚಾ ತೈಲ ಬೇಡಿಕೆಯಲ್ಲಿ ಇಳಿಕೆಯಾಗುತ್ತಿದೆ. ಹೀಗಾಗಿ, 2020ರ ಎರಡನೇ ತ್ರೈಮಾಸಿಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯನ್ನು ಕಡಿಮೆ ಮಾಡುವಂತೆ ಒಪೆಕ್‌ಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.