ಆಪರೇಷನ್ ಸಿಂಧೂರ
ನವದೆಹಲಿ: ‘ಆಪರೇಷನ್ ಸಿಂಧೂರ’ (Operation Sindoor) ಎನ್ನುವ ಹೆಸರಿನ ಹಕ್ಕಿಗಾಗಿ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ( Reliance Industries) ಸಂಸ್ಥೆಯು ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಮುಂದೆ ಮೇ 7 ರಂದು (ಬುಧವಾರ) ಅರ್ಜಿ ಸಲ್ಲಿಸಿದೆ.
ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಎಂದು ಹೆಸರಿಡಲಾಗಿತ್ತು.
ರಿಲಯನ್ಸ್ ಬೆನ್ನಲ್ಲೇ ಇತರ ಮೂವರು ಅರ್ಜಿ ಸಲ್ಲಿಸಿದ್ದು, ಹೆಸರಿನ ಹಕ್ಕು ಪಡೆಯಲು ಪೈಪೋಟಿ ಆರಂಭವಾಗಿದೆ.
ಟ್ರೇಡ್ ಮಾರ್ಕ್ ಕಾಯ್ದೆ (ಹಕ್ಕು ಸ್ವಾಮ್ಯ ಕಾಯ್ದೆ)ಯ ವರ್ಗ 41ರಡಿ (ಶಿಕ್ಷಣ ಹಾಗೂ ಮನರಂಜನಾ ಸೇವೆ) ‘ಸರಕು ಹಾಗೂ ಸೇವೆ’ಯಡಿ ಹೆಸರಿನ ಹಕ್ಕಿಗೆ ನಾಲ್ವರು ಅರ್ಜಿ ಸಲ್ಲಿಸಿದ್ದಾರೆ.
ಮುಕೇಶ್ ಚೆತರ್ಮ್ ಅಗ್ರವಾಲ್, ಗ್ರೂಪ್ ಕ್ಯಾಪ್ಟನ್ ಕಮಲ್ ಸಿಂಗ್ ಒಬೆರಾಯ್ (ನಿವೃತ್ತ) ಹಾಗೂ ಅಲೋಕ್ ಕೊಥಾರಿ ಕೂಡ ಆಪರೇಷನ್ ಸಿಂಧೂರ ಹೆಸರಿನ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ್ದಾರೆ.
‘ಸಿಂಧೂರ್’ ಎನ್ನುವ ಪದ ತ್ಯಾಗ ಮತ್ತು ಶೌರ್ಯದ ಸಂಕೇತವಾಗಿರುವುದರಿಂದ ಕಾರ್ಯಾಚರಣೆಗೆ ಇಟ್ಟ ಹೆಸರು ಭಾರಿ ತೂಕ ಪಡೆದುಕೊಂಡಿದೆ.
ವರ್ಗ 41ರಡಿ ‘ಶಿಕ್ಷಣ ಹಾಗೂ ತರಬೇತಿ ಸೇವೆಗಳು, ಸಿನಿಮಾ ಹಾಗೂ ಮಾಧ್ಯಮ ನಿರ್ಮಾಣ, ನೇರ ಪ್ರದರ್ಶನ ಹಾಗೂ ಕಾರ್ಯಕ್ರಮಗಳು, ಡಿಜಿಟಲ್ ಕಂಟೆಂಟ್ ವಿತರಣೆ ಹಾಗೂ ಪ್ರಕಟಣೆ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು’ ಬರುತ್ತವೆ.
ಒಟಿಟಿ ಪ್ಲಾಪ್‌ಫಾರಂಗಳು ಹಾಗೂ ನಿರ್ಮಾಣ ಸಂಸ್ಥೆಗಳು ಈ ವಿಭಾಗದಲ್ಲಿ ಹಕ್ಕುಸ್ವಾಮ್ಯ ಪಡೆಯುತ್ತವೆ. ಹೀಗಾಗಿ ಆಪರೇಷನ್ ಸಿಂಧೂರ ಶೀಘ್ರ ಸಿನಿಮಾ, ವೆಬ್ ಸಿರೀಸ್ ಅಥವಾ ಡಾಕ್ಯುಮೆಂಟರಿ ಆಗುವ ಸಾಧ್ಯತೆ ಇದೆ.
(ವಿವಿಧ ಮೂಲಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.