ADVERTISEMENT

ಜಿಡಿಪಿ ಕುಸಿತ ತಡೆಗಟ್ಟದ ಕೊಡುಗೆ: ಬ್ಯಾಂಕ್‌ ಆಫ್‌ ಅಮೆರಿಕ, ನೊಮುರಾ ವಿಶ್ಲೇಷಣೆ

ಪಿಟಿಐ
Published 18 ಮೇ 2020, 19:30 IST
Last Updated 18 ಮೇ 2020, 19:30 IST

ಮುಂಬೈ : ಕೇಂದ್ರ ಸರ್ಕಾರ ಘೋಷಿಸಿರುವ ಆರ್ಥಿಕ ಉತ್ತೇಜನಾ ಕೊಡುಗೆಗಳು ಅಲ್ಪಾವಧಿಯಲ್ಲಿ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೆಚ್ಚಳಕ್ಕೆ ನೆರವಾಗುವುದಿಲ್ಲ ಎಂದು ವಿಶ್ಲೇಷಿಸಲಾಗಿದೆ.

₹ 20 ಲಕ್ಷ ಕೋಟಿ ಮೊತ್ತದ ಆರ್ಥಿಕ ಕೊಡುಗೆಗಳು ಮುಂದಿನ ಮೂರು ವರ್ಷಗಳಲ್ಲಿ ಆರ್ಥಿಕ ವೃದ್ಧಿ ದರ ಹೆಚ್ಚಳಕ್ಕೆ ನೆರವಾಗಲಿವೆ. ಆದರೆ, ಪ್ರಸಕ್ತ ಹಣಕಾಸು ವರ್ಷದ ಆರ್ಥಿಕ ವೃದ್ಧಿ ದರದ ಮೇಲೆ ಇವುಗಳ ಪ್ರಭಾವ ಗೌಣವಾಗಿರಲಿದೆ ಎಂದು ಬ್ಯಾಂಕ್‌ ಆಫ್‌ ಅಮೆರಿಕ ಮತ್ತು ಜಪಾನಿನ ನೊಮುರಾ ಅಂದಾಜಿಸಿವೆ.

ಭಾರತದ ಆರ್ಥಿಕತೆ ಎದುರಿಸುತ್ತಿರುವ ಸಂಕಷ್ಟಗಳ ತೀವ್ರತೆ ತಗ್ಗಿಸಲು ಈ ಕೊಡುಗೆಗಳಿಂದ ತಕ್ಷಣಕ್ಕೆ ಪರಿಹಾರ ಸಿಗುವುದಿಲ್ಲ. ಮಧ್ಯಮಾವಧಿಯಲ್ಲಿ ಆರ್ಥಿಕ ಪ್ರಗತಿ ಚೇತರಿಕೆ ಕಾಣುವ ಬಗೆಯಲ್ಲಿ ಈ ಕೊಡುಗೆಗಳನ್ನು ರೂಪಿಸಲಾಗಿದೆ ಎಂದು ನೊಮುರಾ ಹೇಳಿದೆ.

ADVERTISEMENT

ಸಂಕೀರ್ಣ ಸ್ವರೂ‌ಪದ ಸಮಸ್ಯೆಗೆ ಪರಿಹಾರದ ಮಂತ್ರದಂಡವನ್ನೇನೂ ಈ ಕೊಡುಗೆಗಳು ಒಳಗೊಂಡಿಲ್ಲ. ಸರ್ಕಾರ ಕೈಗೊಂಡಿರುವ ಹತ್ತಾರು ಸುಧಾರಣಾ ಕ್ರಮಗಳು ಆರ್ಥಿಕತೆಯನ್ನು ಮೇಲೆತ್ತಲು ಕೆಲ ಸಮಯ ಹಿಡಿಯುತ್ತದೆ. ಜೂನ್‌ ತ್ರೈಮಾಸಿಕದಲ್ಲಿ ವೃದ್ಧಿ ದರವು ಗಮನಾರ್ಹ ಕುಸಿತ ಕಾಣಲಿದೆ. ಹಣ ವೆಚ್ಚ ಮಾಡಲು ಸರ್ಕಾರ ‌ಹೆಚ್ಚು ಜಾಗರೂಕತೆ ವಹಿಸಿದೆ. ಸೂಕ್ಷ್ಮ ವಿಷಯವಾದ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಈ ಬಿಕ್ಕಟ್ಟಿನ ಸಂದರ್ಭವನ್ನು ಬಳಸಿಕೊಳ್ಳಲಾಗಿದೆ. ಪ್ರವಾಸ, ಹೋಟೆಲ್‌ನಂತಹ ಕೆಲ ಪ್ರಮುಖ ವಲಯಗಳ ಸಂಕಷ್ಟಗಳನ್ನು ಬಗೆಹರಿಸಲು ಸರ್ಕಾರ ಗಮನ ಹರಿಸಿಲ್ಲ. ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ಹೆಚ್ಚು ಹಣ ನೀಡುವುದರಿಂದ ವಲಸಿಗರು ಗ್ರಾಮಗಳಲ್ಲೇ ಉಳಿಯಲಿದ್ದಾರೆ. ಇದರಿಂದ ನಗರಗಳಲ್ಲಿ ಕಾರ್ಮಿಕರ ಲಭ್ಯತೆ ಕಡಿಮೆಯಾಗಲಿದೆ ಎಂದೂ ನೊಮುರಾ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.