ಮ್ಯೂಚುವಲ್ ಫಂಡ್
ನವದೆಹಲಿ: ದೇಶದಾದ್ಯಂತ 2.5 ಲಕ್ಷ ಗ್ರಾಮ ಪಂಚಾಯಿತಿಗಳ ಸದಸ್ಯರಿಗೆ ‘ಹೂಡಿಕೆ ಶಿಕ್ಷಣ’ ನೀಡುವ ಗುರಿಯೊಂದಿಗೆ, ಪಂಚಾಯತ್ ರಾಜ್ ಸಚಿವಾಲಯವು, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸಹಯೋಗದಲ್ಲಿ ರಾಷ್ಟ್ರವ್ಯಾಪಿ ತರಬೇತಿ ಕಾರ್ಯಕ್ರಮವೊಂದನ್ನು ರೂಪಿಸಿದೆ.
ಈ ತರಬೇತಿಯಡಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತ್ತು ಪಂಚಾಯತ್ ರಾಜ್ ಬ್ಲಾಕ್ ಮಟ್ಟದ ಸಿಬ್ಬಂದಿಗೆ ಷೇರುಪೇಟೆ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಬಂಡವಾಳ ತೊಡಗಿಸುವ ಕುರಿತು ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಷೇರುಪೇಟೆಯಲ್ಲಿ ಬಂಡವಾಳ ತೊಡಗಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಆದರೆ, ಇದರಲ್ಲಿ ಗ್ರಾಮೀಣರ ಸಹಭಾಗಿತ್ವ ಕಡಿಮೆ ಇದೆ. ಗ್ರಾಮೀಣ ಮಟ್ಟದಲ್ಲಿ ಹಣಕಾಸು ಸಾಕ್ಷರತೆ ಹೆಚ್ಚಿಸಿ, ಸುರಕ್ಷಿತ ಹೂಡಿಕೆ ಪ್ರೋತ್ಸಾಹಿಸುವುದರ ಭಾಗವಾಗಿ ಈ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ.
ಈಗಾಗಲೇ ಪುಣೆಯಲ್ಲಿ ವಿವಿಧ ಜಿಲ್ಲೆಗಳ 100ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮತ್ತು ಬ್ಲಾಕ್ ಮಟ್ಟದ ಪ್ರತಿನಿಧಿಗಳಿಗೆ ತರಬೇತಿ ನೀಡಲಾಗಿದೆ. ತರಬೇತಿ ಪಡೆದ ಪಂಚಾಯಿತಿ ಅಧ್ಯಕ್ಷರನ್ನು ‘ಹಣಕಾಸು ಸಾಕ್ಷರತೆ ರಾಯಭಾರಿ’ಯಾಗಿ ಪರಿಗಣಿಸಲಾಗುವುದು ಎಂದು ಪಂಚಾಯತ್ ರಾಜ್ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.