ADVERTISEMENT

ರಷ್ಯಾ ಮಾರುಕಟ್ಟೆಗೆ ‘ಪತಂಜಲಿ’: ರಾಮದೇವ - ಚೆರೆಮಿನ್ ನಡುವೆ ಒಪ್ಪಂದಕ್ಕೆ ಸಹಿ

ಪಿಟಿಐ
Published 6 ಡಿಸೆಂಬರ್ 2025, 15:41 IST
Last Updated 6 ಡಿಸೆಂಬರ್ 2025, 15:41 IST
   

ನವದೆಹಲಿ: ಯೋಗ ಗುರು ಬಾಬಾ ರಾಮದೇವ ನೇತೃತ್ವದ ಪತಂಜಲಿ ಸಮೂಹವು ರಷ್ಯಾ ಸರ್ಕಾರದ ಜೊತೆ ಶನಿವಾರ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಇದರ ಪರಿಣಾಮವಾಗಿ ಸಮೂಹಕ್ಕೆ ರಷ್ಯಾದ ಮಾರುಕಟ್ಟೆ ಪ್ರವೇಶಿಸಲು ಸಾಧ್ಯವಾಗಲಿದೆ.

ಒಪ್ಪಂದವು ಆರೋಗ್ಯ ಮತ್ತು ಆರೈಕೆ, ಆರೋಗ್ಯ ಪ್ರವಾಸೋದ್ಯಮ, ಕುಶಲ ಮಾನವ ಸಂಪನ್ಮೂಲದ ವಿನಿಮಯ, ಸಂಶೋಧನೆಗೆ ಸಂಬಂಧಿಸಿದ ಉಪಕ್ರಮಗಳಿಗೆ ಅನುವು ಮಾಡಿಕೊಡಲಿದೆ ಎಂದು ಪ್ರಕಟಣೆಯೊಂದು ತಿಳಿಸಿದೆ.

ಪತಂಜಲಿ ಸಮೂಹದ ಪರವಾಗಿ ರಾಮದೇವ ಅವರು ರಷ್ಯಾದ ವಾಣಿಜ್ಯ ಸಚಿವ ಹಾಗೂ ಇಂಡೊ–ರಷ್ಯಾ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸರ್ಗೈ ಚೆರೆಮಿನ್ ಅವರು ಒಪ್ಪಂದದ ದಾಖಲೆಗಳಿಗೆ ಸಹಿ ಮಾಡಿದರು.

ADVERTISEMENT

ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ಅವರು ಆರಂಭಿಸಿದ ಪತಂಜಲಿ ಸಮೂಹವು ಆಯುರ್ವೇದ ಉತ್ಪನ್ನಗಳು ಹಾಗೂ ಎಫ್‌ಎಂಸಿಜಿ ಉತ್ಪನ್ನಗಳಿಂದಾಗಿ ಹೆಸರುವಾಸಿ ಆಗಿದೆ. ಪತಂಜಲಿ ಆಯುರ್ವೇದ್ ಮತ್ತು ಪತಂಜಲಿ ಫುಡ್ಸ್‌ ಈ ಸಮೂಹದ ಅಂಗಸಂಸ್ಥೆಗಳಾಗಿವೆ.

ರಷ್ಯಾದ ಜನ ಆಯುರ್ವೇದವನ್ನು ಬಹಳ ಮೆಚ್ಚಿಕೊಂಡಿದ್ದಾರೆ, ಅವರು ಯೋಗ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಯನ್ನು ಅಳವಡಿಸಿಕೊಂಡಿದ್ದಾರೆ ಎಂದು ರಾಮದೇವ ಅವರು ಹೇಳಿದ್ದಾರೆ.

‘ಋಷಿಗಳು ರೂಪಿಸಿದ ಈ ಆರೋಗ್ಯ ವಿಜ್ಞಾನವನ್ನು ಜಗತ್ತಿನ ಸರಿಸುಮಾರು 200 ದೇಶಗಳಿಗೆ ಕೊಂಡೊಯ್ಯುವುದು ನಮ್ಮ ಮುಖ್ಯ ಗುರಿ. ಇದಕ್ಕೆ ರಷ್ಯಾ ಹೆಬ್ಬಾಗಿಲಾಗಿ ಇರಲಿದೆ’ ಎಂದು ರಾಮದೇವ ವಿವರಿಸಿದ್ದಾರೆ.

‘ಪತಂಜಲಿ ಕಂಪನಿಯ ಆರೈಕೆ ಸೇವೆಗಳನ್ನು ರಷ್ಯಾಕ್ಕೆ ವಿಸ್ತರಿಸುವುದು ಒಪ್ಪಂದದ ಮುಖ್ಯ ಗುರಿ. ಭಾರತದ ಅಧ್ಯಾತ್ಮಿಕ ಜ್ಞಾನವನ್ನು, ಸಂಸ್ಕೃತಿಯನ್ನು, ಯೋಗವನ್ನು, ಆಯುರ್ವೇದವನ್ನು ಮತ್ತು ಅಮೂಲ್ಯವಾದ ಪರಂಪರೆಯನ್ನು ರಷ್ಯಾದ ಜೊತೆ ಹಂಚಿಕೊಳ್ಳುವುದು ಎರಡನೆಯ ಗುರಿ’ ಎಂದು ಅವರು ತಿಳಿಸಿದ್ದಾರೆ.

ಈ ಒಪ್ಪಂದದ ಭಾಗವಾಗಿ ಭಾರತದ ಪ್ರಮುಖ ಜನಪ್ರಿಯ ಬ್ರ್ಯಾಂಡ್‌ಗಳನ್ನು ರಷ್ಯಾದಲ್ಲಿ, ರಷ್ಯಾದ ಪ್ರಮುಖ ಬ್ರ್ಯಾಂಡ್‌ಗಳನ್ನು ಭಾರತದಲ್ಲಿ ಜನಪ್ರಿಯಗೊಳಿಸಲಾಗುತ್ತದೆ.

ಪತಂಜಲಿ ಕಂಪನಿಯ ಯೋಗ, ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ರಷ್ಯಾದ ಜನರ ಜೀವನಶೈಲಿಯನ್ನು ಬದಲಾಯಿಸುವ, ಅವರನ್ನು ರೋಗಮುಕ್ತವಾಗಿಸುವ ಉದ್ದೇಶ ಇದೆ ಎಂದು ಸರ್ಗೈ ಚೆರೆಮಿನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.