ADVERTISEMENT

ನಾಲ್ಕೂವರೆ ತಿಂಗಳ ಬಳಿಕ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಮಾರ್ಚ್ 2022, 2:43 IST
Last Updated 22 ಮಾರ್ಚ್ 2022, 2:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸುಮಾರು ನಾಲ್ಕೂವರೆ ತಿಂಗಳ ನಂತರ ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಏರಿಕೆಯಾಗಿದೆ. ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ 80 ಪೈಸೆಯಷ್ಟು ಹೆಚ್ಚಳವಾಗಿರುವುದಾಗಿ ವರದಿಯಾಗಿದೆ.

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ದರ ₹96.21, ಪ್ರತಿ ಲೀಟರ್‌ ಡೀಸೆಲ್‌ಗೆ ₹87.47; ಮುಂಬೈನಲ್ಲಿ ಲೀಟರ್‌ ಪೆಟ್ರೋಲ್‌ ₹110.78, ಡೀಸೆಲ್‌ ₹94.94; ಕೋಲ್ಕತ್ತದಲ್ಲಿ ಪೆಟ್ರೋಲ್‌ ₹102.16 ಮತ್ತು ಡೀಸೆಲ್‌ ₹90.62; ಚೆನ್ನೈನಲ್ಲಿ ಪೆಟ್ರೋಲ್‌ ದರ ₹102.16, ಡೀಸೆಲ್‌ ದರ ₹92.19 ಆಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‌ಗೆ ₹101.42 ಮತ್ತು ಡೀಸೆಲ್‌ಗೆ 85.80 ತಲುಪಿದೆ.

2021ರ ನವೆಂಬರ್‌ 2ರ ನಂತರ ಇದೇ ಮೊದಲ ಬಾರಿಗೆ ಇಂಧನ ದರದಲ್ಲಿ ಹೆಚ್ಚಳ ಮಾಡಲಾಗಿದೆ. ರಷ್ಯಾ–ಉಕ್ರೇನ್‌ ನಡುವಿನ ಸಂಘರ್ಷ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯ ನಡುವೆ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸುಂಕ ಕಡಿತಗೊಳಿಸುವ ಮೂಲಕ ದರ ಏರಿಕೆಯನ್ನು ನಿಯಂತ್ರಿಸಲು ಕ್ರಮವಹಿಸಿತ್ತು. ಕಳೆದ ವರ್ಷ ನವೆಂಬರ್‌ನಿಂದ ಈವರೆಗೂ ಕಚ್ಚಾ ತೈಲ ದರದಲ್ಲಿ ಶೇಕಡ 25ರಷ್ಟು ಏರಿಕೆಯಾಗಿದೆ.

ADVERTISEMENT

ವಿಮಾನಕ್ಕೆ ಬಳಕೆಯಾಗುವ ಇಂಧನ ದರವನ್ನು ಜನವರಿಯಿಂದ ಶೇಕಡ 50ರಷ್ಟು ಹೆಚ್ಚಿಸಲಾಗಿದೆ ಹಾಗೂ ಸಗಟು ಲೆಕ್ಕದಲ್ಲಿ ಖರೀದಿಸುವ ಡೀಸೆಲ್‌ ದರ ಕಳೆದ ವಾರ ಪ್ರತಿ ಲೀಟರ್‌ಗೆ ₹25ರಷ್ಟು ಹೆಚ್ಚಳವಾಗಿದೆ.

ಭಾರತವು ತೈಲ ಬಳಕೆಯಲ್ಲಿ ಜಗತ್ತಿನ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿದ್ದು, ಬಳಕೆಯ ಶೇಕಡ 85ರಷ್ಟು ಇಂಧನ ಆಮದು ಮಾಡಿಕೊಳ್ಳಲಾಗುತ್ತಿದೆ. ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮತ್ತು ರಷ್ಯಾ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧಗಳ ಪರಿಣಾಮ ಕಚ್ಚಾ ತೈಲ ದರ ಬ್ಯಾರೆಲ್‌ಗೆ 100 ಡಾಲರ್‌ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.