ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಶೇ10ರಷ್ಟು ಏರಿಕೆ?

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚಳ ಪರಿಣಾಮ

ಅನ್ನಪೂರ್ಣ ಸಿಂಗ್
Published 28 ಸೆಪ್ಟೆಂಬರ್ 2021, 15:31 IST
Last Updated 28 ಸೆಪ್ಟೆಂಬರ್ 2021, 15:31 IST
.
.   

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳ ಆಗಿರುವ ಪರಿಣಾಮವಾಗಿ ಮುಂಬರುವ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ತೀವ್ರ ಏರಿಕೆ ಆಗುವ ಸಾಧ್ಯತೆ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಶೇಕಡ 8ರಿಂದ ಶೇ 10ರಷ್ಟು ಹೆಚ್ಚಳ ಆಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

‘ತೈಲ ಬೇಡಿಕೆಯು ಹೆಚ್ಚಾಗುತ್ತಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 85–86 ಡಾಲರ್‌ಗೆ ತಲುಪಬಹುದು. ವರ್ಷಾಂತ್ಯದವೇಳೆಗೆ ಬೆಲೆಯು ಬ್ಯಾರೆಲ್‌ಗೆ 90 ಡಾಲರ್‌ ಆಗಬಹುದು ಎಂದು ಗೋಲ್ಡ್‌ಮನ್‌ ಸ್ಯಾಚ್ಸ್‌ ಸಂಸ್ಥೆಯು ಅಂದಾಜು ಮಾಡಿದೆ.

ಇದರ ಜೊತೆಯಲ್ಲಿ, ಅಮೆರಿಕದ ಡಾಲರ್ ಎದುರು ರೂಪಾಯಿ ಇನ್ನಷ್ಟು ದುರ್ಬಲಗೊಂಡರೆ ನಾವು ಪೆಟ್ರೋಲ್ ಮತ್ತು ಡೀಸೆಲ್‌ಗೆ ನೀಡಬೇಕಾದ ಬೆಲೆಯಲ್ಲಿ ಶೇ 8 ಅಥವಾ ಶೇ 10ರಷ್ಟು ಏರಿಕೆ ಆಗಬಹುದು’ ಎಂದು ಕೇದಿಯಾ ಕಮಾಡಿಟಿಸ್‌ ಸಂಸ್ಥೆಯ ನಿರ್ದೇಶಕ ಅಜಯ್ ಕುಮಾರ್ ‘ಪ್ರಜಾವಾಣಿ’ಗೆ ವಿವರಿಸಿದರು.

ADVERTISEMENT

ಕೋವಿಡ್‌ ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಗೆ ತಂದಿದ್ದ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ. ಇದರಿಂದಾಗಿ ತೈಲದ ಬೇಡಿಕೆ ಹೆಚ್ಚಾಗಿದೆ. ಜಾಗತಿಕ ಮಟ್ಟದಲ್ಲಿ ತೈಲದ ಬೇಡಿಕೆಯು ಪೂರೈಕೆ ಪ್ರಮಾಣಕ್ಕಿಂತ ಹೆಚ್ಚಾಗಲಿದೆ ಎಂದು ಅಂತರ ರಾಷ್ಟ್ರೀಯ ಇಂಧನ ಸಂಸ್ಥೆ ಹಾಗೂ ಒಪೆಕ್ ಅಂದಾಜಿಸಿವೆ. ಇದರಿಂದಾಗಿ ಸದ್ಯದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯು ಇಳಿಕೆ ಆಗದು.

ಆದರೆ, ಹಲವು ಕಾರಣಗಳಿಂದಾಗಿ ಕಚ್ಚಾ ತೈಲ ಉತ್ಪಾದನೆಗೆ ಪೆಟ್ಟು ಬಿದ್ದಿದೆ. ಕಚ್ಚಾ ತೈಲದ ಬೆಲೆ ಹೆಚ್ಚಳವಾದರೆ ಭಾರತದಲ್ಲಿ ಚಿಲ್ಲರೆ ಹಣದುಬ್ಬರ ದರವು ಏರಿಕೆ ಆಗುತ್ತದೆ. ಈಗ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6ರ ಸಮೀಪ ಇದೆ. ತೈಲ ಬೆಲೆ ಇನ್ನಷ್ಟು ಹೆಚ್ಚಳವಾದರೆ ಕೌಟುಂಬಿಕ ವೆಚ್ಚಗಳ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಆದರೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ತಗ್ಗಿಸುವ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೆಟ್ರೋಲ್‌ 20 ಪೈಸೆ, ಡೀಸೆಲ್‌ 25 ಪೈಸೆ ಹೆಚ್ಚಳ

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಮಂಗಳವಾರ ಪೆಟ್ರೋಲ್‌ ದರವನ್ನು ಲೀಟರಿಗೆ 20 ಪೈಸೆಯಷ್ಟು, ಡೀಸೆಲ್‌ ದರವನ್ನು ಲೀಟರಿಗೆ 25 ಪೈಸೆಯಷ್ಟು ಹೆಚ್ಚಿಸಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬ್ಯಾರಲ್‌ಗೆ 80 ಡಾಲರ್‌ಗಳ ಸಮೀಪ ಬಂದಿರುವುದರಿಂದ ಇಂಧನ ದರದಲ್ಲಿ ಹೆಚ್ಚಳ ಆಗಿದೆ.

ಎಚ್‌ಪಿಸಿಎಲ್‌ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಮಂಗಳವಾರ ಪೆಟ್ರೋಲ್‌ ದರ ₹
104.9 ಮತ್ತು ಡೀಸೆಲ್‌ ದರ ₹ 95.03ಕ್ಕೆ ತಲುಪಿದೆ.

ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಪೆಟ್ರೋಲ್‌ ದರ ಹೆಚ್ಚಿಸಲಾಗಿದೆ. ಡೀಸೆಲ್‌ ದರ ನಾಲ್ಕನೇ ಬಾರಿ ಹೆಚ್ಚಾಗಿದೆ. ಸೆಪ್ಟೆಂಬರ್‌ 24ರ ನಂತರದಲ್ಲಿ ಡೀಸೆಲ್‌ ದರ ಲೀಟರಿಗೆ 95 ಪೈಸೆ ಹೆಚ್ಚಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಮೂರು ವರ್ಷಗಳ ಗರಿಷ್ಠ ಮಟ್ಟದ ಸಮೀಪಕ್ಕೆ ಬಂದಿದ್ದು, ಜಾಗತಿಕ ಉತ್ಪಾದನೆಯಲ್ಲಿ ಅಡಚಣೆ ಆಗಿರುವುದರಿಂದ ಕಂಪನಿಗಳನ್ನು ತಮ್ಮ ಸಂಗ್ರಹದಿಂದ ಹೆಚ್ಚು ಕಚ್ಚಾ ತೈಲವನ್ನು ಹೊರತೆಗೆಯುತ್ತಿವೆ. ಅಮೆರಿಕದ ಕಚ್ಚಾ ತೈಲ ಸಂಗ್ರಹದ ಮಟ್ಟವು ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.