ADVERTISEMENT

ಪೆಟ್ರೋಲ್‌ ಬೆಲೆ ತುಟ್ಟಿ: ಹಣದುಬ್ಬರಕ್ಕೆ ಹಾದಿ

ನಷ್ಟ ಭರ್ತಿಗೆ ಗ್ರಾಹಕರಿಗೆ ಎಕ್ಸೈಸ್‌ ಡ್ಯೂಟಿ ಹೊರೆ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 14:23 IST
Last Updated 14 ಜೂನ್ 2020, 14:23 IST
ಪೆಟ್ರೋಲ್‌ ಬಂಕ್‌ನ ಪ್ರಾತಿನಿಧಿಕ ಚಿತ್ರ
ಪೆಟ್ರೋಲ್‌ ಬಂಕ್‌ನ ಪ್ರಾತಿನಿಧಿಕ ಚಿತ್ರ    

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೀರ್ಘ ವಿರಾಮದ ನಂತರ ಇಂಧನಗಳ ಬೆಲೆ ಹೆಚ್ಚಿಸುತ್ತಿರುವುದು ಬೆಲೆ ಏರಿಕೆಗೆ ಕಾರಣವಾಗಿ ಕೌಟುಂಬಿಕ ಬಜೆಟ್‌ ಮತ್ತು ದೇಶಿ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಏರಿಕೆ ಹಾದಿಯಲ್ಲಿ (ಪ್ರತಿ ಬ್ಯಾರಲ್‌ಗೆ 40 ಡಾಲರ್‌ ಆಸುಪಾಸಿನಲ್ಲಿ ಸ್ಥಿರ) ಇರದಿದ್ದರೂ ದೇಶದಲ್ಲಿ ಇಂಧನ ಬೆಲೆಯು ಹೆಚ್ಚುತ್ತಲೇ ಇದೆ.

ಲಾಕ್‌ಡೌನ್‌ ಸಂದರ್ಭದಲ್ಲಿಯೇ ಕಚ್ಚಾ ತೈಲದ ಬೆಲೆಯು ಎರಡು ದಶಕಗಳ ಕನಿಷ್ಠ ಮಟ್ಟವಾದ ಪ್ರತಿ ಬ್ಯಾರಲ್‌ಗೆ 20 ಡಾಲರ್‌ ಆಸುಪಾಸಿಗೆ ಕುಸಿದಿತ್ತು. ಅಗ್ಗದ ತೈಲದ ಪ್ರಯೋಜನ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಮಾರ್ಚ್‌ ಮತ್ತು ಮೇನಲ್ಲಿ ಹೆಚ್ಚಿಸಿರುವ ಎಕ್ಸೈಸ್‌ ಡ್ಯೂಟಿಯ ಹೊರೆಯನ್ನು ತೈಲ ಮಾರಾಟ ಕಂಪನಿಗಳು ಈಗ ಗ್ರಾಹಕರಿಗೆ ವರ್ಗಾಯಿಸಲಾಗುತ್ತಿವೆ.

ADVERTISEMENT

ಲಾಕ್‌ಡೌನ್‌ ಸಡಿಲಿಕೆಯಾಗಿ ಆರ್ಥಿಕ ಚಟುವಟಿಕೆಗಳು ವೇಗ ಪಡೆಯುತ್ತಿದ್ದಂತೆ ತೆರಿಗೆ ಹೊರೆಯನ್ನು ಈಗ ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ. ತಮ್ಮ ನಷ್ಟ ಸರಿದೂಗಿಸಲು ತೈಲ ಮಾರಾಟ ಕಂಪನಿಗಳು ಇಂಧನ ಬೆಲೆಯನ್ನು ಪ್ರತಿ ಲೀಟರ್‌ಗೆ ₹ 4 ರಿಂದ ₹ 5ರವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.

ಪ್ರತಿ ದಿನದ ಬೆಲೆ ಏರಿಕೆಯಿಂದಾಗಿ ಬಳಕೆದಾರರು ಇಂಧನಕ್ಕೆ ಮಾಡುವ ತಿಂಗಳ ವೆಚ್ಚವು ತಕ್ಷಣಕ್ಕೆ ಗಮನಕ್ಕೆ ಬರುವುದಿಲ್ಲ. ದಿನಗಳೆದಂತೆ ಪೆಟ್ರೋಲ್‌, ಡೀಸೆಲ್‌ ಖರೀದಿಗೆ ಮಾಡುವ ವೆಚ್ಚವು ಕಿಸೆಗೆ ಭಾರವಾಗುತ್ತದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳಗೊಳ್ಳುತ್ತದೆ. ಕುಟುಂಬದ ತಿಂಗಳ ಬಜೆಟ್‌ ಏರುಪೇರಾಗಲಿದೆ.

ಬೇಡಿಕೆಗೆ ಹೊಡೆತ: ಇಂಧನಕ್ಕೆ ಮಾಡುವ ವೆಚ್ಚ ಹೆಚ್ಚುತ್ತಿದ್ದಂತೆ ಗ್ರಾಹಕರ ಉಳಿತಾಯ ಕಡಿಮೆಯಾಗಲಿದೆ ಇಲ್ಲವೇ ಇತರ ವೆಚ್ಚಗಳಿಗೆ ಕಡಿವಾಣ ಬೀಳಲಿದೆ. ಇದರಿಂದ ಸರಕು ಮತ್ತು ಸೇವೆಗಳ ಬೇಡಿಕೆ ಕುಸಿಯಲಿದೆ.

ಕೋವಿಡ್‌ ಪಿಡುಗಿನ ಪ್ರಭಾವದಿಂದಾಗಿ ಸದ್ಯಕ್ಕೆ ಬೇಡಿಕೆ ಗಮನಾರ್ಹವಾಗಿ ಕುಸಿದಿದೆ. ಇಂಧನಗಳ ಬೆಲೆ ಏರಿಕೆಯು ಇತರ ಸರಕುಗಳ ಬೇಡಿಕೆಯನ್ನು ಇನ್ನಷ್ಟು ಕುಂದಿಸಲಿದೆ.

ಹಣದುಬ್ಬರಕ್ಕೆ ಹಾದಿ: ದುಬಾರಿ ಡೀಸೆಲ್‌ನಿಂದಾಗಿ ಸರಕು ಸಾಗಣೆ ವೆಚ್ಚ ಹೆಚ್ಚಲಿದೆ. ಇದರಿಂದ ತರಕಾರಿ, ಹಣ್ಣು ಮತ್ತು ದಿನಸಿ ಪದಾರ್ಥ ಮತ್ತಿತರ ಸರಕುಗಳ ಬೆಲೆಯೂ ಏರಿಕೆಯಾಗಲಿದೆ. ಇದು ಹಣದುಬ್ಬರಕ್ಕೆ ಹಾದಿ ಮಾಡಿಕೊಡಲಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ 15 ದಿನಗಳ ಬೆಲೆ ಸರಾಸರಿ ಆಧರಿಸಿ ದೇಶದಲ್ಲಿ ಇಂಧನಗಳ ಬೆಲೆ ನಿಗದಿಪಡಿಸಲಾಗುತ್ತಿದೆ. ಇದೇ ಮಾನದಂಡ ಆಧರಿಸಿ 2017ರ ಜೂನ್‌ದಿಂದೀಚೆಗೆ ಇಂಧನ ಬೆಲೆಗಳನ್ನು ಪ್ರತಿ ದಿನ ಪರಿಷ್ಕರಿಸಲಾಗುತ್ತಿದೆ. ರಾಜ್ಯಗಳ ವಿಧಾನಸಭೆ ಸಂದರ್ಭದಲ್ಲಿ ಮಾತ್ರ ಸಕಾರಣ ಇಲ್ಲದೇ ಪರಿಷ್ಕರಣೆ ಸ್ಥಗಿತಗೊಂಡಿರುತ್ತದೆ. ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಬೆಲೆ ಪರಿಷ್ಕರಣೆಗೆ 82 ದಿನಗಳಷ್ಟು ಸುದೀರ್ಘ ವಿರಾಮ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.