ADVERTISEMENT

ಜಿಎಸ್‌ಟಿ ವ್ಯಾಪ್ತಿಗೆ ತೈಲೋತ್ಪನ್ನಗಳನ್ನು ತಂದರೆ ಲೀಟರ್‌ ಪೆಟ್ರೋಲ್‌ಗೆ ₹ 75

ಎಸ್‌ಬಿಐ ಅರ್ಥಶಾಸ್ತ್ರಜ್ಞರ ಅಭಿಮತ

ಪಿಟಿಐ
Published 4 ಮಾರ್ಚ್ 2021, 22:24 IST
Last Updated 4 ಮಾರ್ಚ್ 2021, 22:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಪೆಟ್ರೋಲ್‌ ಅನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತಂದರೆ, ಅದರ ದರವು ಲೀಟರಿಗೆ ₹ 75ಕ್ಕೆ ಇಳಿಯಲಿದೆ. ಜಿಎಸ್‌ಟಿ ವ್ಯಾಪ್ತಿಗೆ ಡೀಸೆಲ್‌ ಅನ್ನೂ ತಂದರೆ, ಅದರ ದರವು ಲೀಟರಿಗೆ ₹ 68ಕ್ಕೆ ಇಳಿಕೆ ಆಗಲಿದೆ.

‘ಆದರೆ ಹೀಗೆ ಮಾಡುವುದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ಇದರಿಂದಾಗಿ ಜಾಗತಿಕವಾಗಿ ತೈಲೋತ್ಪನ್ನಗಳ ದರವು ಗರಿಷ್ಠ ಮಟ್ಟದಲ್ಲಿ ಇರುವ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ಒಂದಾಗಿದೆ’ ಎಂದು ಎಸ್‌ಬಿಐ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಪೆಟ್ರೋಲ್‌ ಮತ್ತು ಡೀಸೆಲ್‌ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದರಿಂದ ಕೇಂದ್ರ ಮತ್ತು ರಾಜ್ಯಗಳಿಗೆ ಆಗುವ ವರಮಾನ ನಷ್ಟವು ₹ 1 ಲಕ್ಷ ಕೋಟಿ ಮಾತ್ರ ಎಂದು ಅವರು ಅಂದಾಜಿಸಿದ್ದಾರೆ. ಜಿಎಸ್‌ಟಿ ವ್ಯವಸ್ಥೆಗೆ ಬಂದರೆ ಪೆಟ್ರೋಲ್ ಬಳಕೆಯು ಶೇ 10ರಷ್ಟು, ಡೀಸೆಲ್ ಬಳಕೆಯು ಶೇ 15ರಷ್ಟು ಹೆಚ್ಚಾಗುತ್ತದೆ ಎಂದು ಊಹಿಸಿ ವರಮಾನ ನಷ್ಟದ ಮೊತ್ತವನ್ನು ಲೆಕ್ಕ ಹಾಕಲಾಗಿದೆ.

ADVERTISEMENT

ಕಚ್ಚಾ ತೈಲ ದರವು ಒಂದು ಬ್ಯಾರಲ್‌ಗೆ 60 ಅಮೆರಿಕನ್ ಡಾಲರ್‌ ಮತ್ತು ಡಾಲರ್‌–ರೂಪಾಯಿ ವಿನಿಮಯ ದರ ₹ 73 ಆಗಿರುತ್ತದೆ,ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಜಿಎಸ್‌ಟಿ ವ್ಯವಸ್ಥೆಯಲ್ಲಿ ಶೇ 28ರಷ್ಟು ತೆರಿಗೆ ವಿಧಸಲಾಗುತ್ತದೆ ಎಂದು ಭಾವಿಸಿ ಅವರು ಬೆಲೆಯ ಲೆಕ್ಕಾಚಾರ ಮಾಡಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ವರಮಾನದ ಪ್ರಮುಖ ಮೂಲ. ಈ ಕಾರಣಕ್ಕಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಮತ್ತು ರಾಜ್ಯಗಳಿಗೆ ಇಷ್ಟವಿಲ್ಲ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೆಟ್ರೋಲ್–ಡೀಸೆಲ್‌ನಿಂದ ರಾಜ್ಯಕ್ಕೆ ₹12,342 ಕೋಟಿ ತೆರಿಗೆ

ಬೆಂಗಳೂರು: ‘ಡೀಸೆಲ್‌ ಮತ್ತು ಪೆಟ್ರೋಲ್‌ನಿಂದ ರಾಜ್ಯ ಸರ್ಕಾರಕ್ಕೆ 2020–21ನೇ ಸಾಲಿನಲ್ಲಿ ಜನವರಿ ಅಂತ್ಯಕ್ಕೆ ₹12,432 ಕೋಟಿ ತೆರಿಗೆ ಬಂದಿದೆ’ ಎಂದು ರಾಜ್ಯ ಸರ್ಕಾರ ಹೇಳಿದೆ.

ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ನ ಪ್ರಕಾಶ್‌ ರಾಠೋಡ್‌ ಪ್ರಶ್ನೆ ಕೇಳಿದ್ದರು.

‘ದಕ್ಷಿಣದ ರಾಜ್ಯಗಳಿಗೆ ಹೋಲಿಸಿದಾಗ ಕೇರಳ ಬಿಟ್ಟು ಪೆಟ್ರೋಲ್‌, ಡೀಸೆಲ್‌ ಬೆಲೆ ನಮ್ಮ ರಾಜ್ಯದಲ್ಲಿಯೇ ಕಡಿಮೆ ಇದೆ. ಆದರೆ, ಈ ಮೂಲದಿಂದ ಕೇಂದ್ರ ಸರ್ಕಾರಕ್ಕೆ ಎಷ್ಟು ತೆರಿಗೆ ಬಂದಿದೆ ಎಂಬ ಮಾಹಿತಿ ಇಲ್ಲ’ ಎಂದು ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

₹11,355 ಕೋಟಿ ಬಾಕಿ: ‘ಈ ಸಾಲಿನ ಜನವರಿಯವರೆಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ₹11,355 ಕೋಟಿ ಜಿಎಸ್‌ಟಿ ಪರಿಹಾರ ಬಾಕಿ ಇದೆ’ ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.