
ನವದೆಹಲಿ: ನೌಕರರ ಭವಿಷ್ಯನಿಧಿ ಸಂಘಟನೆಯ (ಇಪಿಎಫ್‌ಒ) ಧರ್ಮದರ್ಶಿಗಳ ಮಂಡಳಿಯು ಪಿ.ಎಫ್ ಹಣ ಹಿಂಪಡೆಯಲು ಇದ್ದ ನಿಯಮಗಳನ್ನು ಸಡಿಲಗೊಳಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ.
ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ನೇತೃತ್ವದಲ್ಲಿ ನಡೆದ ಮಂಡಳಿಯ ಸಭೆಯು ಹಲವು ತೀರ್ಮಾನಗಳನ್ನು ತೆಗೆದುಕೊಂಡಿದೆ ಎಂದು ಕಾರ್ಮಿಕ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಪಿ.ಎಫ್ ಮೊತ್ತವನ್ನು ಭಾಗಶಃ ಹಿಂದಕ್ಕೆ ಪಡೆಯುವುದಕ್ಕೆ ಸಂಬಂಧಿಸಿದ, ಸಂಕೀರ್ಣವಾದ 13 ಅಂಶಗಳನ್ನು ಮೂರು ವರ್ಗಗಳ ಅಡಿ ಒಗ್ಗೂಡಿಸಲು ಮಂಡಳಿ ತೀರ್ಮಾನಿಸಿದೆ. ಅತ್ಯಗತ್ಯವಾದವು (ಅನಾರೋಗ್ಯ, ಶಿಕ್ಷಣ, ಮದುವೆ ವೆಚ್ಚಗಳು), ಗೃಹ ಅಗತ್ಯಗಳು ಮತ್ತು ವಿಶೇಷ ಸಂದರ್ಭದ ಅಗತ್ಯಗಳು ಎಂಬುದು ಆ ಮೂರು ವರ್ಗಗಳು.
ಹಿಂಪಡೆಯಲು ಲಭ್ಯವಿರುವ ಅಷ್ಟೂ ಮೊತ್ತವನ್ನು ಪಡೆಯಲು ಇನ್ನು ಮುಂದೆ ಇಪಿಎಫ್‌ಒ ಚಂದಾದಾರರಿಗೆ ಸಾಧ್ಯವಾಗಲಿದೆ. ಭಾಗಶಃ ಹಿಂಪಡೆಯಬೇಕು ಎಂದಾದರೆ ನೌಕರರು ಕನಿಷ್ಠ 12 ತಿಂಗಳು ಸೇವೆ ಸಲ್ಲಿಸಿದ್ದರೆ ಸಾಕು. ಅಲ್ಲದೆ, ಶಿಕ್ಷಣ ಮತ್ತು ಮದುವೆ ಉದ್ದೇಶಕ್ಕೆ ಹೆಚ್ಚಿನ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗಲಿದೆ.
‘ವಿಶೇಷ ಸಂದರ್ಭ’ಗಳ ಅಡಿಯಲ್ಲಿ ಹಣ ಹಿಂಪಡೆಯುವಾಗ ನೌಕರರು ಕಾರಣವನ್ನು ಉಲ್ಲೇಖಿಸಬೇಕು ಎಂಬ ನಿಯಮ ಇತ್ತು. ಆದರೆ ಇನ್ನು ಮುಂದೆ ಅವರು ಯಾವುದೇ ಕಾರಣ ಉಲ್ಲೇಖಿಸದೆ ಈ ವರ್ಗದ ಅಡಿಯಲ್ಲಿ ಹಣವನ್ನು ಹಿಂಪಡೆಯಲು ಅರ್ಜಿ ಸಲ್ಲಿಸಬಹುದು.
ಸದಸ್ಯರ ಖಾತೆಯಲ್ಲಿನ ಶೇ 25ರಷ್ಟು ಮೊತ್ತವನ್ನು ಕಾಯ್ದುಕೊಳ್ಳಬೇಕಿರುವ ‘ಕನಿಷ್ಠ ಮೊತ್ತ’ ಎಂದು ವರ್ಗೀಕರಿಸಲು ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ. ಆಗ, ಆ ಮೊತ್ತಕ್ಕೆ ಹೆಚ್ಚಿನ ಬಡ್ಡಿಯ (ಈಗ ಶೇ 8.25ರಷ್ಟು ಇದೆ) ಪ್ರಯೋಜನ ಪಡೆಯಲು ಇಪಿಎಫ್‌ಒ ಚಂದಾದಾರರಿಗೆ ಸಾಧ್ಯವಾಗುತ್ತದೆ.
ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ಮನೆಬಾಗಿಲಿಗೆ ತಲುಪಿಸುವ ಸೇವೆ ಒದಗಿಸಲು ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಜೊತೆ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ಈ ಸೇವೆಯ ಮೂಲಕ ಇಪಿಎಸ್–95 ಪಿಂಚಣಿದಾರರಿಗೆ ಜೀವನ್ ಪ್ರಮಾಣಪತ್ರ ಪಡೆದುಕೊಳ್ಳಲು ಸಹಾಯ ಆಗುತ್ತದೆ. ಪ್ರಮಾಣಪತ್ರಕ್ಕೆ ಆಗುವ ₹50 ವೆಚ್ಚವನ್ನು ಇಪಿಎಫ್‌ಒ ಭರಿಸಲಿದೆ.
ಈ ಸೌಲಭ್ಯ ಜಾರಿಗೆ ಬಂದ ನಂತರದಲ್ಲಿ ಇಪಿಎಸ್–95 ಪಿಂಚಣಿದಾರರು ತಮ್ಮ ಜೀವನ್ ಪ್ರಮಾಣಪತ್ರವನ್ನು ಅಂಚೆ ಇಲಾಖೆಯ ಪೇಮೆಂಟ್ಸ್ ಬ್ಯಾಂಕ್‌ನ ಶಾಖೆಗಳ ಮೂಲಕ ಉಚಿತವಾಗಿ ಸಲ್ಲಿಸಲು ಸಾಧ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.